ಸುದ್ದಿಒನ್, ಚಿತ್ರದುರ್ಗ, ಜುಲೈ.27 : ಗಾಳಿಪಟಹಬ್ಬ ನಮ್ಮ ಶಾಲೆಯ ವಿಶೇಷ ಹಬ್ಬಗಳಲ್ಲಿ ಒಂದಾಗಿದೆ. ಆಷಾಢ ಶುದ್ಧ ಏಕಾದಶಿಯ ದಿನದಂದು ದೇಶದ ಅನೇಕ ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕಾರ್ಯದರ್ಶಿ ಡಾ.ಕೆ ರಾಜೀವಲೋಚನ್ ತಿಳಿಸಿದರು.
ನಗರದ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ಶನಿವಾರ ಗಾಳಿಪಟ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜೀವನದಲ್ಲಿ ಸಂಸ್ಕಾರ ಎಂಬ ಸೂತ್ರಗಳು ಮನುಷ್ಯನನ್ನು ಹೇಗೆ ಸರಿದಾರಿಯಲ್ಲಿ ಕೊಂಡೊಯ್ಯುತ್ತವೆಯೋ ಹಾಗೆಯೇ ಗಾಳಿಪಟವು ಎತ್ತರಕ್ಕೆ ಹಾರಲು ಸೂತ್ರ ಬಹಳ ಮುಖ್ಯ. ಅದೇ ರೀತಿ ಮನುಷ್ಯ ಎಷ್ಟೇ ಉನ್ನತ ಸಾಧನೆ ಮಾಡಿದರೂ ಎಷ್ಟೇ ಉನ್ನತ ಹಂತದಲ್ಲಿದ್ದರೂ ಸಹ ಅವನಿಗೆ ಸಂಸ್ಕಾರವೆಂಬ ಸೂತ್ರ ತುಂಬಾ ಮುಖ್ಯವಾಗುತ್ತದೆ. ಸೂತ್ರ ಸರಿಯಾಗಿಲ್ಲದಿದ್ದರೆ ಜೀವನವು ಎಡರು-ತೊಡರುಗಳಿಗೆ, ಏರುಪೇರುಗಳಿಗೆ ಒಳಗಾಗುತ್ತದೆ. ಆದ್ದರಿಂದ ಗಾಳಿಪಟವನ್ನು ಹೇಗೆ ಸೂತ್ರದ ಮೂಲಕ ನಿಯಂತ್ರಿಸುತ್ತೇವೆಯೋ ಹಾಗೆಯೇ ನಮ್ಮ ಜೀವನವನ್ನು ನಿಯಂತ್ರಿಸಿಕೊಳ್ಳಲು ಸಂಸ್ಕಾರಗಳು ಅವಶ್ಯಕ. ಅಂತಹ ಉನ್ನತ ಸಂಸ್ಕಾರಗಳನ್ನು ರೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.
ನಂತರ ಶಾಲೆಯ ಪ್ರಾಂಶುಪಾಲರಾದ ಪ್ರಜ್ವಲ್ ಬಿ. ಎಂ. ರವರು ಮಾತನಾಡುತ್ತಾ ಗಾಳಿಪಟವು ಹಬ್ಬವು ಜಾನಪದ, ದೇಶಿಯ ಕಲೆಗಳಲ್ಲಿ ಒಂದಾಗಿದೆ. ಈ ಗಾಳಿಪಟವು ಮನಸ್ಸಿಗೆ ಸಂತೋಷ ಹಾಗೂ ಮುದವನ್ನು ನೀಡುವುದರ ಜೊತೆಗೆ ಇತರೆ ಕಾರ್ಯಗಳಲ್ಲಿ ನಮ್ಮನ್ನು ಸದಾ ಹಸನ್ಮುಖಿಯಾಗಿ ಕಾರ್ಯನ್ಮೊಖರಾಗಲು ನಮಗೆ ಪ್ರೇರಣೆ ನೀಡುತ್ತದೆ. ಪಾಲಕರು ತಮ್ಮ ಮಕ್ಕಳ ಸಂಸ್ಕಾರ ಎಷ್ಟರ ಮಟ್ಟಿಗೆ ಬಿಗಿ ಹಿಡಿಯುತ್ತಾರೆಯೋ, ಅಷ್ಟು ಎತ್ತರಕ್ಕೆ ಮಕ್ಕಳು ಬೆಳೆಯುತ್ತಾರೆ. ಗಾಳಿಪಟ ಎಷ್ಟು ಬಾನೆತ್ತತರಕ್ಕೆ ಹಾರುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ಸಂಸ್ಕಾರಗಳನ್ನು ರೂಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಓಂಕಾರಪ್ಪ, ಆಡಳಿತಾಧಿಕಾರಿಗಳಾದ ಹನುಮೇಶ್ ಪದಕಿ ಹಾಗೂ ಶಿಕ್ಷಕವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು ಬಣ್ಣ ಬಣ್ಣದ ಗಾಳಿಪಟಗಳನ್ನ ಮುಗಿಲೆತ್ತರಕ್ಕೆ ಹಾರಿಸಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು.