ಬೆಂಗಳೂರು: ನಟ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಇತ್ತಿಚೆಗೆ ಅವರನ್ನು ನೋಡಲು ಸಾಕಷ್ಟು ಜನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಇದೀಗ ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಸಿದ್ದರೂಢ ಎಂಬುವವರು ದರ್ಶನ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರೂಢ ಕೂಡ ಈ ಮೊದಲು ಜೈಲಿನಲ್ಲಿಯೇ ಇದ್ದವರು. ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನಲ್ಲಿದ್ದು, ಸನ್ನಡತೆಯ ಆಧಾರದ ಮೇಲೆ ರಿಲೀಸ್ ಆಗಿ ಬಂದಿದ್ದಾರೆ. ಇದೀಗ ದರ್ಶನ್ ಅವರನ್ನು ಭೇಟಿ ಮಾಡಿ ಬಂದ ವಿಚಾರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಸಿದ್ದರೂಢ ಒಬ್ಬ ರೈತ ಕುಟುಂಬದಿಂದ ಬಂದವರು. ಕಾಮಗಾರಿ ಮಾಡುವ ವೇಳೆ ಅವರ ತಂದೆಗೆ ಇಂಜಿನಿಯರ್ ಒಬ್ಬ ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಈ ಸಂಬಂಧ ತಂದೆ ಹಾಗೂ ಇಂಜಿನಿಯರ್ ನಡುವೆ ಜಗಳವಾಗಿದೆ. ಇಂಜಿನಿಯರ್ ತಂದೆಗೆ ಹೊಡೆದಿದ್ದನ್ನು ಸಹಿಸಲು ಆಗದೆ ಸಿದ್ದರೂಢ ಆತನನ್ನು ಕೊಂದೇ ಬಿಟ್ಟಿದ್ದ. ಇದೇ ಕೇಸಲ್ಲಿ 21 ವರ್ಷಗಳ ಕಾಲ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಸನ್ನಡತೆಯ ಆಧಾರದ ಮೇಲೆ ಸದ್ಯ ರಿಲೀಸ್ ಆಗಿದ್ದಾರೆ.
ಆದರೆ ಈ ವೇಳೆ ಮಾತನಾಡಿರುವ ಸಿದ್ದರೂಢ, ನಾನು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು. ಸಾಯಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಆದರೆ ಯಾವುದೇ ದಾರಿಯಿಲ್ಲದೆ ಅಂದು ಜೈಲಿಗೆ ಹೋಗಿದ್ದೆ. 21 ವರ್ಷಗಳ ಜೈಲು ವಾಸ ಅನುಭವಿಸಿದ್ದೀನಿ . ಸನ್ನಡತೆಯ ಆಧಾರದ ಮೇಲೆ ಹೊರಗೆ ಬಂದಿದ್ದೀನಿ ಎಂದಿದ್ದಾರೆ. ಇದೇ ವೇಳೆ ದರ್ಶನ್ ಬಗ್ಗೆಯೂ ಮಾತನಾಡಿ, ಬಿಡುಗಡೆಗೂ ಮುನ್ನ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಅವರಲ್ಲಿ ಪಶ್ಚಾತ್ತಾಪದ ಭಾವನೆ ಇತ್ತು ಎಂದಿದ್ದಾರೆ.