ಸುದ್ದಿಒನ್ : ಕಾರ್ಗಿಲ್ ವಿಜಯ್ ದಿವಸ್ 2024 ( kargil vijay diwas 2024) : ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ (1999 ಜುಲೈ 26 ರಂದು) ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ದಿನ. ಇಂದಿನ ದಿನವನ್ನು ‘ರಜತ್ ಜಯಂತಿ’ ಎಂದು ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ 2024 ರ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ..!
ಕಾರ್ಗಿಲ್ ವಿಜಯ್ ದಿವಸ್ 2024 : 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳ ಮೇಲಿನ ವಿಜಯದ ಸ್ಮರಣಾರ್ಥ ಭಾರತವು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸುತ್ತದೆ. ಇದು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ. ಆದರೆ ಇಂದಿನ ಈ ಕಾರ್ಗಿಲ್ ವಿಜಯ್ ದಿವಸ್ 2024 ವಿಶೇಷವೇನೆಂದರೆ, ಈ ವರ್ಷ ನಾವು ಆಚರಿಸತ್ತಿರುವುದು 25 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಈ ದಿನದಂದು ನಮ್ಮ ರಾಷ್ಟ್ರದ ಗೌರವಕ್ಕಾಗಿ ಹೋರಾಡಿದ ವೀರರಿಗೆ ಗೌರವ ಸಲ್ಲಿಸೋಣ ಮತ್ತು ಕಾರ್ಗಿಲ್ ವಿಜಯದ ಮಹತ್ವ ಮತ್ತು ಯುದ್ಧವನ್ನು ನಡೆದ ಅಂದಿನ ಘಟನೆಗಳನ್ನು ಸ್ಮರಿಸೋಣ….
ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ:
1999 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಭಾರತದ ನಿಯಂತ್ರಿತ ಪ್ರದೇಶಕ್ಕೆ ಪಾಕಿಸ್ತಾನಿ ಪಡೆಗಳ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಮುನ್ನುಡಿ ಬರೆಯಿತು. ಶತ್ರು ಪಡೆಗಳ ದಾಳಿಗೆ ಪ್ರತೀಕಾರವಾಗಿ, ನುಸುಳುಕೋರರನ್ನು ಹಿಮ್ಮೆಟ್ಟಿಸಲು ಮತ್ತು ಆಯಕಟ್ಟಿನ ಸ್ಥಾನಗಳನ್ನು ಮರಳಿ ಪಡೆಯಲು ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿತು. ಸುಮಾರು 3 ತಿಂಗಳ ಯುದ್ಧದ ನಂತರ, ಜುಲೈ 26, 1999 ರಂದು, ಭಾರತೀಯ ಪಡೆಗಳು ಕಾರ್ಗಿಲ್ ವಲಯದಿಂದ ನುಸುಳುಕೋರರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದವು. ಅಂದಿನಿಂದ ಭಾರತವು ನಮ್ಮ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಗೌರವಿಸಲು ಈ ಕಾರ್ಯಕ್ರಮವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಆಚರಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 1971 ರಲ್ಲಿ ದೊಡ್ಡ ಯುದ್ಧ ನಡೆಯಿತು. ಬಾಂಗ್ಲಾದೇಶದಿಂದ ಪಾಕಿಸ್ತಾನದ ಸೇನೆಯನ್ನು ಓಡಿಸಲು ಭಾರತ ಸಹಾಯ ಮಾಡಿತು. ಈ ಯುದ್ಧದ ನಂತರ ಬಾಂಗ್ಲಾದೇಶ ಪ್ರತ್ಯೇಕ ದೇಶವಾಗಿ ರೂಪುಗೊಂಡಿತು. ಈ ಯುದ್ಧದ ನಂತರ, ಪಾಕಿಸ್ತಾನಿ ಮತ್ತು ಭಾರತೀಯ ಸೇನೆಗಳು ಸಿಯಾಚಿನ್ ಪರ್ವತಗಳ ಎರಡೂ ಬದಿಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿದವು. 1998ರಲ್ಲಿ ಎರಡೂ ದೇಶಗಳು ಪರಮಾಣು ಪರೀಕ್ಷೆ ನಡೆಸಿದಾಗ ಉಭಯ ದೇಶಗಳ ನಡುವಿನ ದ್ವೇಷ ಉತ್ತುಂಗಕ್ಕೇರಿತು. ನಂತರ, ಉಭಯ ದೇಶಗಳ ಸರ್ಕಾರಗಳು ಫೆಬ್ರವರಿ 1999 ರಲ್ಲಿ ಶತೃತ್ವವನ್ನು ಮರೆತು ಸಹಬಾಳ್ವೆಯಿಂದ ಇರಲು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಕಾರ, ಅವರು ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಒಪ್ಪಿಕೊಂಡರು.
ಆದರೆ ಮೇಲಿನ ಒಪ್ಪಂದಕ್ಕೆ ಸಹಿ ಹಾಕಿದ ನಂತರವೂ ಪಾಕಿಸ್ತಾನ ಸೇನೆ ತನ್ನ ನರಿಬುದ್ದಿಯನ್ನು ಪ್ರದರ್ಶಿಸಿತು. 1999 ರ ಚಳಿಗಾಲದಲ್ಲಿ, ಕಾರ್ಗಿಲ್‌ನ ದ್ರಾಸ್ ಮತ್ತು ಬಟಾಲಿಕ್ ಪ್ರದೇಶಗಳಿಗೆ ರಹಸ್ಯವಾಗಿ ಸೈನ್ಯವನ್ನು ಕಳುಹಿಸಿತು. ಉಭಯ ದೇಶಗಳ ಸೇನೆಗಳು ಸಾಮಾನ್ಯವಾಗಿ ತೀವ್ರ ಚಳಿ ಮತ್ತು ಹಿಮದ ಕಾರಣ ಅಲ್ಲಿಂದ ಸ್ವಲ್ಪ ಹಿಂದೆ ಸರಿಯುತ್ತವೆ. ಈ ವೇಳೆ ದುರ್ಬುದ್ಧಿಯಿಂದ ಯೋಚಿಸಿದ ಪಾಕಿಸ್ತಾನ ಇದನ್ನು ಅವಕಾಶವನ್ನಾಗಿ ಬಳಸಿಕೊಂಡು ಪಾಕಿಸ್ತಾನಿ ಸೈನಿಕರು ಭಾರತದ ಸೇನಾ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ಬಗ್ಗೆ ಭಾರತೀಯ ಸೇನೆಗೆ ಗೊತ್ತಾಗಲು ಸ್ವಲ್ಪ ಸಮಯ ಹಿಡಿಯಿತು. ಮೊದಲಿಗೆ ಅವರನ್ನು ಭಯೋತ್ಪಾದಕರೆಂದು ಭಾವಿಸಿದ ಭಾರತೀಯ ಸೇನೆ ಅವರನ್ನು ಎದುರಿಸಲು ಕೆಲ ಸೈನಿಕರನ್ನು ಕಳುಹಿಸಿತು. ಆದರೆ ಅದು ಭಯೋತ್ಪಾದಕರಲ್ಲ, ಪಾಕಿಸ್ತಾನದ ಮಿಲಿಟರಿ ಎಂದು ಗೊತ್ತಾದಾಗ ಉಭಯ ದೇಶಗಳ ನಡುವೆ ಯುದ್ಧ ಪ್ರಾರಂಭವಾಯಿತು.
ಈ ಯುದ್ಧಕ್ಕಾಗಿ ಸುಮಾರು ಎರಡು ಲಕ್ಷ ಭಾರತೀಯ ಸೈನಿಕರು ಕಾರ್ಗಿಲ್‌ನ ಯುದ್ದಭೂಮಿಯಲ್ಲಿ ಹೋರಾಟ ಮಾಡಿದ್ದಾರೆ. ಅತೀ ಪ್ರಮಾದಕರವಾದ ಭೂಪ್ರದೇಶ, ಹವಾಮಾನ ವೈಪರೀತ್ಯಗಳು, 18,000 ಅಡಿ ಎತ್ತರದ ಪ್ರದೇಶ ಮತ್ತು ಆರಂಭದಲ್ಲಿ ಅನಾನುಕೂಲತೆಯ ಹೊರತಾಗಿಯೂ, ಭಾರತೀಯ ಪಡೆಗಳು ಜುಲೈ 26, 1999 ರಂದು ಎಲ್ಲಾ ಆಕ್ರಮಿತ ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದವು.
ಕಾರ್ಗಿಲ್ ಯುದ್ಧದಲ್ಲಿನ ಈ ವಿಜಯವು ಭಾರತೀಯ ಸೇನೆಯ ಶೌರ್ಯ, ಪರಾಕ್ರಮ, ಸಾಹಸ ಮತ್ತು ರಾಷ್ಟ್ರೀಯತೆಯ ಸಾಕ್ಷಿಯಾಗಿದೆ. ‘ಜುಲೈ 26 ಕಾರ್ಗಿಲ್ ವಿಜಯ್ ದಿವಸ್’ ಭಾರತೀಯ ಸಶಸ್ತ್ರ ಪಡೆಗಳ ಅದಮ್ಯ ಚೇತನ, ಶೌರ್ಯವನ್ನು ಗೌರವಿಸಲು ಭಾರತೀಯ ಇತಿಹಾಸದಲ್ಲಿ ದಾಖಲಾಗಿದೆ.
ಕಾರ್ಗಿಲ್ ವಿಜಯ್ ದಿವಸ್ 2024 ವಿಶೇಷತೆಗಳು:
• ಕಾರ್ಗಿಲ್ ವಿಜಯ್ ದಿವಸ್ ದಿನಾಂಕ: 26 ಜುಲೈ
• ಕಾರ್ಗಿಲ್ ವಿಜಯ್ ದಿವಸ್ 2024 : ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ 25 ನೇ ವಾರ್ಷಿಕೋತ್ಸವ
• ಕಾರ್ಗಿಲ್ ಯುದ್ಧದ ಅವಧಿ : 3 ಮೇ – 26 ಜುಲೈ 1999 (2 ತಿಂಗಳು, 3 ವಾರಗಳು ಮತ್ತು 2 ದಿನಗಳು)
• ಕಾರ್ಯಾಚರಣೆಯ ಹೆಸರು: ಆಪರೇಷನ್ ವಿಜಯ್
• ಪ್ರಮುಖ ಸ್ಥಳಗಳು: ಡ್ರಾಸ್, ಕಾರ್ಗಿಲ್, ಬಟಾಲಿಕ್, ಟೈಗರ್ ಹಿಲ್
• ಫಲಿತಾಂಶ: ಭಾರತದ ಗೆಲುವು.. ಕಾರ್ಗಿಲ್ ಅನ್ನು ಭಾರತ ಮರು ವಶಪಡಿಸಿಕೊಂಡಿತು.
• ಭಾರತೀಯ ಸಾವುನೋವುಗಳು: 527 ಸಾವು. 1,363 ಜನರು ಗಾಯಗೊಂಡಿದ್ದಾರೆ.