ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 22 : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಜನಾಂಗಕ್ಕೆ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದು, ಅಧ್ಯಕ್ಷರನ್ನು ನೇಮಿಸಿ ನಿಗಮಕ್ಕೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷದಷ್ಟು ಜನಸಂಖ್ಯೆಯಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಹಾಸಿಗೆ ಹೊಲಿಯುವುದು, ಹಗ್ಗ ಪುಟ್ಟಿ ನೇಯ್ದು ಇಂದಿಗೂ ಜೀವನ ಮಾಡುತ್ತಿರುವ ನದಾಫ್/ಪಿಂಜಾರ ಜನಾಂಗವನ್ನು ಇಲ್ಲಿಯವರೆಗೂ ಆಳಿದ ಎಲ್ಲಾ ಪಕ್ಷಗಳು ಕೇವಲ ಮತ ಬ್ಯಾಂಕನ್ನಾಗಿ ಮಾಡಿಕೊಂಡಿವೆ. ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಮೂಲತಃ ಅಲೆಮಾರಿ ಜನಾಂಗವಾಗಿರುವ ನಮ್ಮನ್ನು ಕಡೆಗಣಿಸುತ್ತಿರುವ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಪ್ರದರ್ಶಿಸಲಾಗುವುದೆಂದು ಪ್ರತಿಭಟನಾನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‍ನಲ್ಲಿ ನಮ್ಮ ಜನಾಂಗಕ್ಕೆ ವಿಶೇಷ ಅನುದಾನ ಮೀಸಲಿಡುವಂತೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಆರ್ಥಿಕವಾಗಿ ಹಿಂದುಳಿದ್ದೇವೆನ್ನುವ ಕಾರಣಕ್ಕಾಗಿ ನಿರ್ಲಕ್ಷಿಸುತ್ತ ಬರುತ್ತಿರುವುದು ನೋವಿನ ಸಂಗತಿ. ಪ್ರವರ್ಗ-1 ಕ್ಕೆ ಸೇರಿದ್ದರು ತಹಶೀಲ್ದಾರ್ ಜಾತಿ ಸರ್ಟಿಫಿಕೇಟ್ ನೀಡುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಎಸ್.ರಶೀದ್ ಅಳಲು ತೋಡಿಕೊಂಡರು.
ಹಿಂದಿನ ಸರ್ಕಾರ ನಮ್ಮ ಜನಾಂಗ ನೇರ ಸೌಲಭ್ಯಗಳನ್ನು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಿದೆಯಾದರೂ ಇದುವರೆವಿಗೂ ಅಧ್ಯಕ್ಷರನ್ನು ನೇಮಿಸಿ ಅನುದಾನ ನೀಡಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದಾಮಯ್ಯನವರು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಪಿಂಜಾರ ಜನಾಂಗ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಪಿಂಜಾರ/ನದಾಫ್ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‍ಸಾಬ್, ರಾಜ್ಯ ಸಮಿತಿ ಸದಸ್ಯ ಬಿ.ಗರೀಬ್‍ಆಲಿ ಮುನ್ನ, ಕಾರ್ಯದರ್ಶಿ ಅಲ್ಲಿಪೀರ್, ಉಪಾಧ್ಯಕ್ಷರುಗಳಾದ ಟಿ.ಶಫಿವುಲ್ಲಾ, ಎಂ.ಮಹಮದ್ ಇಮಾಂ, ಸಹ ಕಾರ್ಯದರ್ಶಿ ಜೆ.ಕೆ.ಅಕ್ಬರ್‍ಭಾಷಾ, ಕೋಶಾಧಿಕಾರಿ ಹೆಚ್.ದಾದಾಪೀರ್, ಸಂಘಟನಾ ಕಾರ್ಯದರ್ಶಿಗಳಾದ ಬುಡೇನ್‍ಸಾಬ್, ಮಹಮದ್‍ಆಲಿ, ವೈ.ಹೆಚ್.ಹುಸೇನ್‍ಪೀರ್, ಅಸ್ಮತ್‍ಉನ್ನಿಸಾ, ಅಬ್ದುಲ್ ಕಲಾಂ, ರಾಜ್ಯ ಸಮಿತಿ ಸದಸ್ಯರುಗಳಾದ ಮಹಮದ್ ಆಲಿ, ಶ್ರೀಮತಿ ರುಖಯ್ಯಾಬಿ, ಹೆಚ್.ಅಬ್ದುಲ್ ಲತೀಫ್, ಸಿ.ಬಷೀರ್ ಅಹಮದ್, ಹೆಚ್.ಟಿಪ್ಪುಸಾಬ್, ಅಬ್ದುಲ್ ಕಲಾಂ ಮಹಿಳಾ, ಘಟಕದ ಅಧ್ಯಕ್ಷೆ ಸಲೀಮ, ತಾಲ್ಲೂಕು ಉಪಾಧ್ಯಕ್ಷೆ ಸಕೀನಾಭಿ, ಮುಬಿನಾ, ಫರ್ಜಾನ ಕೌಸರ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕದ ಅಧ್ಯಕ್ಷರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.