ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ನಗರದ ಹೊರವಲಯದಲ್ಲಿ ಹಾದುಹೋಗುವ ಕ್ಯಾದಿಗೆರೆ ಮತ್ತು ಸೀಬಾರ ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕರಡಿ ಮೃತಪಟ್ಟ ಘಟನೆ ನಡೆದಿದೆ.
ತಮಟೆಕಲ್ಲು ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕರಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಕರಡಿ ಹೆದ್ದಾರಿಯಲ್ಲೇ ಕೊನೆಯುಸಿರೆಳೆದಿದೆ. ಮತ್ತೊಂದು ಕಡೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಿರತೆ, ಕರಡಿ, ಹುಲಿ, ಜಿಂಕೆ ಇನ್ನಿತರ ಕಾಡುಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.