ಬೆಂಗಳೂರು: ರಾಜ್ಯದೆಲ್ಲೆಡೆ ಮಳೆಯ ಅಬ್ಬರ ಜೋರಾಗಿದೆ. ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನ ನಿತ್ರಾಣರಾಗಿದ್ದಾರೆ. ಎಷ್ಟೋ ಜಿಲ್ಲೆಯಲ್ಲಿ ಮಳೆಯಿಂದ ರಸ್ತೆಗಳೇ ಮಾಯಯಾಗಿದ್ದರೆ, ಇನ್ನು ಕೆಲವೆಡೆ ತೋಟಕ್ಕೆಲ್ಲಾ ನೀರು ತುಂಬಿದೆ. ಇನ್ನಷ್ಟು ಕಡೆ ಮನೆ ಕುಸಿತ, ಗುಡ್ಡ ಕುಸಿತದ ಸುದ್ದಿಗಳೇ ಬರುತ್ತಿವೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಮನೆ ಕುಸಿದಿದೆ. ಮನೆಯಲ್ಲಿದ್ದವರಿಗೆ ಅದೃಷ್ಟವಶಾತ್ ಏನು ಆಗಿಲ್ಲ. ಆದರೆ ಮನೆಯಲ್ಲಿದ್ದ ತುಂಬು ಗರ್ಭಿಣಿ ದಾರಿ ಕಾಣದೆ ಕುಸಿದು ಮನೆಯನ್ನೇ ನೋಡುತ್ತಾ ಕುಳಿತಿದ್ದಾರೆ. ಇನ್ನು ಸಾತ್ನಳ್ಳಿ ಹಳ್ಳ ತುಂಬಿ ಹರಿಯುತ್ತಿದ್ದು, ಮಕ್ಕಳನ್ನು ಶಾಲೆಗೆ ಬಿಡಲು ಪೋಷಕರು ಪರದಾಡುತ್ತಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲೂ ಮಳೆಯ ಅಬ್ಬರ ಜೋರಾಗಿದ್ದು ಎಲ್ಲಾಕಡೆ ನೀರು ಹರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿವೆ. ಕಳಸ ರಸ್ತೆಯಂತು ನೀರಿನಿಂದ ತುಂಬಿ ಹರಿಯುತ್ತಿದ್ದು, ರಸ್ತೆಯೇ ಕಾಣದಂತೆ ಆಗಿದೆ.
ಚಿಕ್ಕಬಳ್ಳಾಪುರದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ತೋಟ ಗದ್ದೆಗಳಲ್ಲೆಲ್ಲಾ ನೀರು ತುಂಬಿದೆ. ಬೆಳೆ ಹಾಳಾಗುವ ಭೀತಿಯಲ್ಲಿದ್ದಾರೆ ರೈತರು. ಮಂಗಳೂರು ಭಾಗದಲ್ಲೂ ಮಳೆಯಿಂದಾಗಿ ತೋಟಗಳಿಗೆ ನೀರು ತುಂಬಿದೆ. ಬೆಳೆಯೆಲ್ಲಾ ನಾಶವಾಗುವ ಭಯ ರೈತರಿಗೆ ಕಾಡುತ್ತಿದೆ.
ಇನ್ನು ಉತ್ತರ ಕನ್ನಡದ ಅಂಕೋಲ ಭಾಗದಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತವಾಗುತ್ತಿದೆ. ಇನ್ನು ಕೆಲವೊಂದು ಕಡೆಗಳಲ್ಲಿ ಗುಡ್ಡ ಕುಸಿತ ನಿಂತಿಲ್ಲ. ರಸ್ತೆಯಲ್ಲಿ ಓಡಾಡುವ ವಾಹನಗಳಿಗೂ ಭಯವಾಗಿದೆ. ಕೆಲವೊಂದು ಕಡೆ ಮಳೆ ನಿಲ್ಲುತ್ತಿಲ್ಲ. ರಾಜ್ಯದ ಹಲವೆಡೆ ಜೋರು ಮಳೆಯಾಗುತ್ತಿದೆ. ಕೊಡಗು ಭಾಗದಲ್ಲೂ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಹೀಗಾಗಿ ಕೊಡಗು ಹಾಗೂ ಮಂಗಳೂರು ಭಾಗದಲ್ಲಿ ಮಳೆ ಜೋರಾಗಿದ್ದು ಶಾಲೆಗಳಿಗೂ ರಜೆ ನೀಡಲಾಗಿದೆ. ಹೊರಗೆ ಹೋಗುವ ಜನರಿಗೂ ಎಚ್ಚರಿಕೆ ನೀಡಲಾಗಿದೆ.