ಬೆಂಗಳೂರು: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇಕಡ 75 ರಷ್ಟು ಮೀಸಲಾತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಹಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕನ್ನಡಿಗರು ತುಂಬಾನೇ ಖುಷಿ ಪಟ್ಟಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ರಾಜ್ಯ ಸರ್ಕಾರ ಈ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಈ ಯೋಜನೆ ಹಲವು ದಿನಗಳಿಂದ ಕನ್ನಡಿಗರ ಆಸೆಯಾಗಿತ್ತು. ಎಷ್ಟೇ ಹೋರಾಟ ಮಾಡಿದರೂ ಅದು ಸಾಧ್ಯವಾಗಿರಲಿಲ್ಲ. ಟ್ವಿಟ್ಟರ್ ಅಭಿಯಾನಗಳು ನಡೆದು ಹೋಗಿದ್ದವು. ಆದರೆ ಈ ಬಾರಿಕಾಂಗ್ರೆಸ್ ಸರ್ಕಾರ ನೆನೆಗುದಿಗೆ ಬಿದ್ದಿದ್ದ ಕನ್ನಡಿಗರ ಕನಸನ್ನು ನನಸು ಮಾಡುವುದಕ್ಕೆ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ತಡೆ ಹಿಡಿದಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪರಾಮರ್ಶಿಸಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಸೇರಿದಂತೆ ಎರಡು ಕಾಯ್ದೆಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿತ್ತು. ಆದರೆ ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಉದ್ಯಮಿಗಳಿಂದ ಬಾರೀ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಮಸೂದೆಗೆ ಟಿ.ವಿ.ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ಫೋಸಿಸ್ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾಗಿರುವ ಅವರು, ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚ ಮಾಡಲಿ. ಕನ್ನಡಿಗರಿಗೆ ಉದ್ಯೋಗಕ್ಕೆ ಸೂಕ್ತ ತರಬೇತಿ ನೀಡಲಿ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ವೆಚ್ಚ ಮಾಡಲಿ. ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಕಾನೂನು ಮಾಡಿವುದು ಸರಿಯಲ್ಲ ಅಂತ ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ಕಿರಣ್ ಮಜುಂದಾರ್ ಕೂಡ ಆಕ್ಷೇಪ ವ್ಯಕ್ಯಪಡಿಸಿದ್ದರು. ವಿರೋಧದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ.