ಶಿಕ್ಷಣ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಇಂಗ್ಲಿಷ್ ಪ್ರಮುಖ ಭಾಷೆ : ಯೋಗೀಶ್ ಸಹ್ಯಾದ್ರಿ

1 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ.  : ಇಂಗ್ಲಿಷ್ ಭಾಷೆಯು ಪ್ರಸ್ತುತ ಸಂದರ್ಭದಲ್ಲಿ ಪ್ರಪಂಚದ ಬಹುಬೇಡಿಕೆಯ ಭಾಷೆಯಾಗಿದೆ. ವಿಶೇಷವಾಗಿ ನಮ್ಮ ದೇಶದ ಶಿಕ್ಷಣ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಉಪನ್ಯಾಸಕ ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಸಂಜೆ  ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ವತಿಯಿಂದ  ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಒಂದು ತಿಂಗಳ ಇಂಗ್ಲಿಷ್ ಕಾರ್ಯಾಗಾರವನ್ನು ಕುರಿತು ಮಾತನಾಡಿದರು.

ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಸಹ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿರುವುದಲ್ಲದೆ, ಅಂತರಾಷ್ಟ್ರೀಯ ಭಾಷೆಯಾಗಿರುವುದರಿಂದ ನಮಗೇ ಅರಿವಿಲ್ಲದೆ ಅದರ ಪ್ರಾಬಲ್ಯಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಆದರೆ ದಿನೇ ದಿನೇ ಹೆಚ್ಚು ಪುಸ್ತಕಗಳನ್ನು ಓದುವುದರಿಂದ, ವಿದ್ಯಾರ್ಥಿಗಳ ಹಾಗೂ ಸಹೋದ್ಯೋಗಿಗಳ ಜೊತೆ ಇಂಗ್ಲಿಷ್ ನಲ್ಲಿ ಹೆಚ್ಚಾಗಿ ವ್ಯವಹರಿಸುವುದರಿಂದ ಹಾಗು ನಮ್ಮ ಜ್ಞಾನವನ್ನು ಹೆಚ್ಚಿಸುವ ಇಂಥಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರೂ ತಮ್ಮ ಭಾಷಾ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಯೋಗೀಶ್ ಸಹ್ಯಾದ್ರಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರೊ|| ಪಿಡಿಜಿ. ಮಧುಪ್ರಸಾದ್, 21 ನೇ ಶತಮಾನದಲ್ಲಿ ಇಂಗ್ಲಿಷ್ ಭಾಷೆಗೆ ಅತ್ಯಂತ ಪ್ರಾಮುಖ್ಯತೆಯಿದೆ. ಜಿಲ್ಲೆಯ ಪ್ರತಿಯೊಬ್ಬ ಶಿಕ್ಷಕರು ಚೆನ್ನಾಗಿ ಇಂಗ್ಲಿಷ್ ಕಲಿತು ಮಕ್ಕಳಿಗೆ ಬೋಧಿಸುವುದರಿಂದ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬಹುದಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಏಳ್ಗೆಯ ದೃಷ್ಟಿಯಿಂದ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯು ಚಿತ್ರದುರ್ಗ ಜಿಲ್ಲೆಯಲ್ಲಿ ಯೋಗೀಶ್ ಸಹ್ಯಾದ್ರಿ ಅವರ ನೇತೃತ್ವದಲ್ಲಿ ಗ್ರಾಮೀಣ ಹಾಗು ನಗರ ಪ್ರದೇಶದ ವಿದ್ಯಾರ್ಥಿಗಳ ಮತ್ತು ಆಸಕ್ತರ ಇಂಗ್ಲಿಷ್ ಕೀಳರಿಮೆಯನ್ನು ಹೋಗಲಾಡಿಸಿ ಭಾಷಾ ಕೌಶಲ್ಯವನ್ನು ಹೆಚ್ಚಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *