ಸುದ್ದಿಒನ್, ಬೆಂಗಳೂರು, ಜುಲೈ.14 : ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ ಸಮುದಾಯ ನಿಮ್ಮೊಂದಿಗೆ ಇರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಆಡಳಿತ ನಡೆಸುತ್ತಿರುವುದನ್ನು ಕೆಲ ಜನರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದಲೇ ಅಗತ್ಯವಾಗಿ ಟೀಕೆ, ಆರೋಪ ಮಾಡಿ ಎದೆಗುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ನೊಂದವರು, ಬಡವರು, ಶೋಷಿತರು, ಅಹಿಂದ ವರ್ಗದ ಪ್ರಗತಿಗೆ ಯೋಜನೆಗಳನ್ನು ರೂಪಿಸಿರುವ ಕಾರಣಕ್ಕೆ ಹಾಗೂ ಎಲ್ಲ ವರ್ಗದ ಜನರು ಮೆಚ್ಚಿಕೊಳ್ಳುವ ರೀತಿ ಮಾದರಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರ ಕುರಿತು ಕೆಲವರಲ್ಲಿ ಸಹಜವಾಗಿ ಅಸೂಯೆ ಉಂಟಾಗಿದೆ. ಆದ್ದರಿಂದ ಸುಳ್ಳು ಆರೋಪಗಳಲ್ಲಿ ಕೆಲ ದುಷ್ಟ ಶಕ್ತಿಗಳು ತೊಡಗಿವೆ ಎಂದು ಆರೋಪಿಸಿದರು.
ಇಂತಹ ಯಾವುದೇ ಟೀಕೆಗಳಿಗೆ ಸಿದ್ದರಾಮಯ್ಯ ಎದೆಗುಂದಬೇಕಿಲ್ಲ. ನಮ್ಮ ಪರವಾಗಿ ಆಡಳಿತ ನಡೆಸುತ್ತಿರುವ ನಿಮ್ಮ ಬೆನ್ನಿಗೆ ದಲಿತ ಶಕ್ತಿ ಇದೆ. ತಾವು ನಿರ್ಭಯವಾಗಿ ಮುನ್ನುಗ್ಗಿ. 2013-18 ಅವಧಿಯಲ್ಲಿ ಸ್ವತಂತ್ರವಾಗಿ ಆಡಳಿತ ಮರುಕಳಿಸಲಿ. ಈ ನಿಮ್ಮ ಕಾರ್ಯಕ್ಕೆ ನಾವು ಸದಾ ಬೆಂಬಲವಾಗಿರುತ್ತೇವೆ ಎಂದು ಅಭಯ ನೀಡಿದರು.
ಐದು ವರ್ಷಗಳ ಕಾಲ ನನ್ನನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಖಾತೆ ಸಚಿವರಾಗಿ ಸ್ವತಂತ್ರವಾಗಿ ಕಾರ್ಯನಿರ್ಹಿಸಲು ಅವಕಾಶ ಕೊಟ್ಟಿದ್ದ ಸಿದ್ದರಾಮಯ್ಯ ಅವರ 2013-18 ಆಡಳಿತ ದಲಿತರ ಪಾಲಿಗೆ ಸುವರ್ಣ ಯುಗವಾಗಿತ್ತು ಎಂದರು.
ಸಚಿವನಾಗಿ ಹಾಸ್ಟೆಲ್ ನಿರ್ಮಾಣ ಸೇರಿ ನೂರಾರು ಜನಪರ ಕೆಲಸ ಮಾಡಿದ್ದೇನೆ. ಮುಖ್ಯವಾಗಿ ಡಾ.ಬಾಬು ಜಗಜೀವನರಾಮ್ ಭವನ ಇಡೀ ದೇಶವೇ ಇತ್ತ ತಿರುಗಿ ನೋಡುವ ರೀತಿ ನಿರ್ಮಾಣ ಮಾಡಲು ಶ್ರಮಿಸಿದ್ದೇನೆ. ಇದಕ್ಕೆಲ ಬೆಂಬಲವಾಗಿ ನಿಂತಹವರು ಸಿದ್ಧರಾಮಯ್ಯ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಜನೇಯ ಅವರನ್ನು ಸನ್ಮಾನಿಸಿದರು. ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಬೆಳ್ಳಿಗಧೆ ನೀಡಿ ಗೌರವಿಸಿದರು.
ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಉಪಸ್ಥಿತಿ ಇದ್ದರು.
ಎಚ್.ಆಂಜನೇಯ ಶಕ್ತಿಪ್ರದರ್ಶನ :
ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಮೂಲ ಕಾರಣಕರ್ತರಾದ ಎಚ್.ಆಂಜನೇಯ ಅವರನ್ನು ಸಿದ್ದರಾಮಯ್ಯ ಹಾಗೂ ದಲಿತ ಮುಖಂಡರು ಸನ್ಮಾನಿಸುವ ಸಂದರ್ಭ ಎಚ್.ಆಂಜನೇಯ ಪರವಾಗಿ ಘೋಷಣೆಗಳು ಮೊಳಗಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕರು ತಮ್ಮ ಭಾಷಣದಲ್ಲಿ ಆಂಜನೇಯ ಹೆಸರು ಹೇಳಿದಾಗಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟೆ ಅಭಿಮಾನ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು, ಸಿದ್ದರಾಮಯ್ಯ, ಎಚ್.ಆಂಜನೇಯ ಅವರ ಭಾಷಣದ ವೇಳೆ ಚಪ್ಪಾಳೆ, ಘೋಷಣೆಗಳ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ಇಡೀ ಕಾರ್ಯಕ್ರಮ ಆಂಜನೇಯ ಅವರು ಶಕ್ತಿಪ್ರದರ್ಶನ ನಡೆಸಿದಂತೆ ಭಾಸವಾಯಿತು. ಸೂಕ್ಷ್ಮವಾಗಿ ಜನರ ಅಭಿಮಾನ ಗಮನಿಸುತ್ತಿದ್ದ ಸಿದ್ದರಾಮಯ್ಯ ಅವರು ಪದೇ ಪದೆ ಆಂಜನೇಯ ಅವರತ್ತ ನೋಡಿ ಮೆಚ್ಚುಗೆ ರೀತಿ ಸ್ಮೈಲ್ ಕೊಡುತ್ತಿದ್ದ ದೃಶ್ಯ ನೆರೆದಿದ್ದ ಜನರ ಉತ್ಸಾಹ ಇಮ್ಮಡಿಗೊಳಿಸಿತು.