ಬೆಂಗಳೂರು: ಅಪ್ಪು ಅಗಲಿಕೆಯ ನೋವು ಬರೀ ಸ್ಯಾಂಡಲ್ ವುಡ್ ಮಾತ್ರ ಅಲ್ಲ ಬೇರೆ ಬೇರೆ ಇಂಡಸ್ಟ್ರಿಯವರನ್ನು ಕಾಡುತ್ತಿದೆ. ಕರ್ನಾಟಕ ರತ್ನ ತೆರೆ ಮರೆಯಲ್ಲಿ ಮಾಡ್ತಿದ್ದಂತ ಸಮಾಜ ಸೇವೆಯಲ್ಲಿ ಮಕ್ಕಳ ವಿಧ್ಯಾಭ್ಯಾಸವೂ ಒಂದು. ಈಗ ಅವರಿಲ್ಲದೇ ಎಲ್ಲಾ ಜವಬ್ದಾರಿಯೂ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಹೆಗಲ ಮೇಲೆ ಬಿದ್ದಿದೆ.
ತಮಿಳು ನಟ ವಿಶಾಲ್ ನಿನ್ನೆ ನಡೆದ ನುಡಿ ನಮನದಲ್ಲೂ ಭಾಗಿಯಾಗಿದ್ದರು. ಇಂದು ಕಂಠೀರವ ಸ್ಟುಡಿಯೋಗೆ ಹೋಗಿ ಅಪ್ಪು ಸಮಾಧಿ ಹಾಗೂ ಡಾ. ರಾಜ್‍ಕುಮಾರ್, ಪಾರ್ವತಮ್ಮ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ನಮಸ್ಕರಿಸಿ ಬಂದಿದ್ದಾರೆ.
ಬಳಿಕ ಶಿವಣ್ಣನ ಮನೆಗೋಗಿ ಶಿವಣ್ಣನ ಬಳಿ ಮಾತಾಡಿ ಒಂದಷ್ಟು ಸಂತೈಸಿ ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ಮನೆಗೆ ಬಂದು ಅವರ ಫೋಟೋಗೆ ನಮಸ್ಕರಿಸಿದ್ದಾರೆ. ಕಣ್ಣಲ್ಲಿದ್ದು ನೀರು ಆ ಕ್ಷಣ ಗೊತ್ತಿಲ್ಲದೆ ಹೊರಗೆ ಬಂದಿದೆ. ವಿಶಾಲ್ ಅವರಿಗೆ ದುಃಖ ಹೆಚ್ಚಾಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಮಗಳಿಗೆ ಧೈರ್ಯ ತುಂಬಿ ಬಂದಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಶಾಲ್, ವಿಶಾಲ ಹೃದಯ ತೆರೆದಿಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ವಿಧ್ಯಾಭ್ಯಾಸವನ್ನ ನಾನು ಮುಂದುವರೆಸಬೇಕೆಂದುಕೊಂಡಿದ್ದೇನೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಬಳಿ ಇದಕ್ಕೆ ಅನುಮತಿಯನ್ನು ಕೇಳಿದ್ದೇನೆ. ಅವರು ಸಮಯಾವಾಕಾಶ ತೆಗೆದುಕೊಂಡಿದ್ದಾರೆ. ಅವರು ಅನುಮತಿ ನೀಡಿದ್ರೆ ಅಪ್ಪು ನಡೆಸಿಕೊಂಡು ಹೋಗುತ್ತಿದ್ದಂತೆ ನಾನು ನಡೆಸಿಕೊಂಡು ಹೋಗ್ತೀನಿ ಅಂತ ವಿಶಾಲ್ ತಿಳಿಸಿದ್ದಾರೆ.