ಬೆಂಗಳೂರು: ರಾಜ್ಯದಲ್ಲಿ ಹಗರಣಗಳ ವಿಚಾರವೇ ಬಾರೀ ಸದ್ದು ಮಾಡುತ್ತಿವೆ. ಇದೀಗ ದೇವರಾಜು ಅರಸು ಟರ್ಮಿನಲ್ ಹಗರಣದಲ್ಲಿ ಬಿಜೆಪಿಯ ಮಾಜಿ ಎಂಎಲ್ಸಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರಿನಲ್ಲಿ ಬಯಲಾದ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಲು ಮೈಸೂರಿಗೆ ತೆರಳಿದ್ದರು. ಈ ವೇಳೆ ಪೊಲೀಸರು ಬಿಜೆಪಿಯ ಮಾಜಿ ಎಂಎಲ್ಸಿ ಡಿ.ಎಸ್.ವೀರಯ್ಯ ಅವರನ್ನು ಅರೆಸ್ಟ್ ಮಾಡಿದ್ದಾರೆ.
ವೀರಯ್ಯ ಅವರು 2021 ರಿಂದ 2023ರವರೆಗೂ ದೇವರಾಜು ಅರಸು ಟರ್ಮಿನಲ್ ನಿಗಮದ ಅಧ್ಯಕ್ಷರಾಗಿದ್ದರು. ಆಗ ನಡೆದಿದ್ದ 47 ಕೋಟಿ ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಸಾದ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತುಂಡು ಗುತ್ತಿಗೆ ಆಧಾರದ ಮೇಲೆ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದರು. ದೂರಿನ ಆಧಾರದ ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ವೀರಯ್ಯ ಅವರಿಗೆ ಸಿಟಿ ಸಿವಿಲ್ ಕೋರ್ಟ್ ಹಾಗೂ ಸೆಷನ್ಸ್ ಕೋರ್ಟ್ ನಿಂದ ಜಾಮೀನು ಮಂಜೂರಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ್ದ ಸಿಐಡಿ 600ಕ್ಕೂ ಹೆಚ್ಚು ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
ಇದೀಗ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಸಿಐಡಿ ಪೊಲೀಸರು ವೀರಯ್ಯ ಅವರನ್ನು ಬಂಧಿಸಿದ್ದಾರೆ. ಮೂಡಾ ಹಗರಣದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋದಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ಆರಂಭಿಸಲಿದ್ದಾರೆ. ವಿಚಾರಣೆಯ ಬಳಿಕ ಎಷ್ಟೆಲ್ಲಾ ಹಗರಣಗಳು ನಡೆದಿವೆ, ಯಾರದ್ದೆಲ್ಲಾ ಕೈವಾಡವಿದೆ ಎಂಬುದೆಲ್ಲ ಬೆಳಕಿಗೆ ಬರುವ ಸಾಧ್ಯತೆ ಇದೆ.