ಹಾವೇರಿ : ಬಸವರಾಜ್ ಬೊಮ್ಮಾಯಿ ಅವರು ಈ ಬಾರಿಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ವಿಜಯ ಸಾಧಿಸಿದ್ದಾರೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಹೀಗಾಗಿ ಅವರು ಶಾಸಕರಾಗಿದ್ದ ಶಿಗ್ಗಾವಿ ಕ್ಷೇತ್ರ ತೆರವಾಗಿದೆ. ಅದಕ್ಕೆ ಉಪಚುನಾವಣೆಗೂ ಸಿದ್ಧತೆ ನಡೆಯುತ್ತಿದೆ. ಇದೀಗ ಶಿಗ್ಗಾವಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ಧ. ಇದು ಯಾವುದೇ ರಾಜಕೀಯ ಯಾತ್ರೆಯಲ್ಲ. ಮುಂದಿನ ಚುನಾವಣೆಗೂ ಈ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಶಿಗ್ಗಾವಿ ಸವಣೂರು ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಲು ಈ ಯಾತ್ರೆ ಆರಂಭಿಸಿದ್ದೇನೆ ಎಂದಿದ್ದಾರೆ.
ನಮ್ಮ ನಿಮ್ಮ ನಡುವೆ ಈ ಯಾತ್ರೆಯನ್ನು ಗಟ್ಟಿಗೊಳಿಸುವುದಕ್ಜೆ ಈ ಯಾತ್ರೆಯನ್ನು ಮಾಡುತ್ತಿದ್ದೇವೆ. ನಾನು ಶಾಸಕನಾಗಿಯೇ ನಿಮ್ಮ ಸೇವೆ ಮಾಡಬೇಕು ಎಂದೇನಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಶಾಸಕ ಅಲ್ಲದೆ ಇದ್ದರು ನಿಮ್ಮ ಸೇವೆ ಮಾಡುವುದಕ್ಕೆ ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದೇನೆ. ಇವತ್ತು ಬಹಳ ದೊಡ್ಡ ಪ್ರಮಾಣದ ಅಭಿವೃದ್ಧಿಯಾಗಬೇಕೆಂಬ ಪರಿಕಲ್ಪನೆ ನನ್ನದಾಗಿತ್ತು. ವಾಣಿಜ್ಯಕವಾಗಿ, ಶೈಕ್ಷಣಿಕವಾಗಿ ತಡಸ ಗ್ರಾಮ ಅಭಿವೃದ್ಧಿಯಾಗಬೇಕೆಂಬ ಆಸೆ ನನ್ನದು. ಪ್ರತಿಬಾರಿ ಮತ ಎಣಿಕೆ ನಡೆಯುವುದು ತಡಸ್ ಹಾಗೂ ಮುತ್ತಳ್ಳಿಯಲ್ಲಿ. ಈ ಗ್ರಾಮದ ಜನ ಬರೀ ಮತವನ್ನಲ್ಲ ಆತ್ಮಸ್ಥೈರ್ಯವನ್ನು ನೀಡಿದ್ದಾರೆ ಎಂದು ತಮ್ಮ ಗ್ರಾಮದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.