ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 9 ಜಿಲ್ಲೆಗಳಲ್ಲಿ 56ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲೂ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ನಿವೃತ್ತ ಸೂರಿಡೆಂಟ್ ಇಂಜಿನಿಯರ್ ಎಂ.ರವೀಂದ್ರಪ್ಪಮನೆ ಮೇಲೆ ದಾಳಿ ನಡೆಸಲಾಗಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮುಂಗಸವಳ್ಳಿ ತೋಟದ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವ ಹೊಂದಿದ್ದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಭರ್ಜರಿ ಮತಯಾಚನೆ ಮಾಡಿದ್ದರು.
PWD ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಎರಡು ಕಾರಿನಲ್ಲಿ ಬಂದಿರುವ ಅಧಿಕಾರಿಗಳು ಮನೆ, ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದಾರೆ.
ಮತ್ತೊಬ್ಬ ಅಧಿಕಾರಿ ಜಗದೀಶ್ ಇತ್ತೀಚೆಗೆ ಬಿಬಿಎಂಪಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ವರ್ಗಾವಣೆ ಆಗಿದ್ದರು. ಲೋಕಾಯುಕ್ತರು ದಾಳಿ ನಡೆಸಿದಾಗ ಬಿಬಿಎಂಪಿ ಇಂಜಿನಿಯರ್ ಜಗದೀಶ್ ಅವರ ಮನೆಗೆ ಬೀಗ ಹಾಕಲಾಗಿತ್ತು. ಆದರೂ ಅಧಿಕಾರಿಗಳು ಕಾಯುತ್ತಾ ನಿಂತಿದ್ದಾರೆ.
ಹಾಸನದಲ್ಲೂ ದಾಳಿ ನಡೆದಿದ್ದು, ಗ್ರೇಡ್ 1 ಕಾರ್ಯದರ್ಶಿ ಎನ್.ಎಂ.ಜಗದೀಶ್ ನಿವಾಸ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪದಾನೆ ಆರೋಪ ಹಿನ್ನೆಲೆಯಲ್ಲಿ ನಿವೃತ್ತ ಇಇ ಶಿವರಾಜು ಎಸ್ ಮನೆ ಮೇಲೆ ದಾಳಿ ಮಾಡಲಾಗಿದೆ. ಮಂಡ್ಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮಂಡ್ಯ ಹಾಗೂ ಮೈಸೂರಿನಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಾಗಮಂಗಲದ ಇಜ್ಜಲಘಟ್ಟದಲ್ಲಿ ಮೂರು ಕಡೆ ಹಾಗೂ ಮೈಸೂರಿನಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ. ಬೆಳಗಾವಿಯಲ್ಲಿ ಜಿಪಂ ಎಇಇ ಮೇಲೆ ಮಹಾದೇವ ಬನ್ನೂರ ಮನೆ ಮೇಲೆ ದಾಳಿಯಾಗಿದೆ. ಬೆಳಗಾವಿ ತಾಲೂಕಿನ ಯಳ್ಳೂರ ಹೊರವಲಯದಲ್ಲಿರುವ ಬನ್ನೂರ ಮನೆಗೆ ದಿಢೀರ್ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.
ಕಲಬುರಗಿಯಲ್ಲೂ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ. ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಬೆಳಗ್ಗೆಯಿಂದಾನೂ ಎಲ್ಲರ ಮನೆ, ಕಚೇರಿ ಸೇರಿದಂತೆ ಸಂಬಂಧಪಟ್ಟ ಜಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು ಕಡೆ ಒಂದೇ ದಿನ ದಾಳಿ ನಡೆಸಲಾಗಿದೆ.