ಟಿ20 ವಿಶ್ವಕಪ್ ಮುಗಿದಿದೆ. ನಮ್ಮ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಟ್ರೋಫಿ ಈಗಾಗಲೇ ಎಲ್ಲೆಡೆ ಓಡಾಡಿದೆ. ವಿಶ್ವಕಪ್ ಗೆದ್ದ ಖುಷಿಯಲ್ಲಿಯೇ ಆಟಗಾರರು, ಕ್ರಿಕೆಟ್ ಪ್ರೇಮಿಗಳು, ದೇಶದ ಜನತೆ ತೇಲಾಡುತ್ತಿದ್ದಾರೆ. ಇದರ ನಡುವೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ವಿದಾಯ ಹೇಳಿದ್ದಾರೆ. ಅವರ ಜಾಗಕ್ಕೆ ಗೌತಮ್ ಗಂಭೀರ್ ಹೆಸರನ್ನು ಘೋಷಣೆ ಮಾಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಗೌತಮ್ ಗಂಭೀರ್ ಹೆಸರನ್ನು ಘೋಷಿಸಿದ್ದಾರೆ. ಹೊಸ ಜವಾಬ್ದಾರಿ ತೆಗೆದುಕೊಂಡ ಗೌತಮ್ ಗಂಭೀರ್ ಸಹ ಖುಷಿ ಪಟ್ಟಿದ್ದು, ದೇಶದ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.
ಟೀಂ ಇಂಡಿಯಾ ಕೋಚರ ಆದ ಮೇಲೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ‘ಭಾರತ ಎಂಬುದು ನನ್ನ ಅಸ್ತಿತ್ವ. ದೇಶದ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ನನ್ನ ದೊಡ್ಡ ಭಾಗ್ಯಾ. ಭಾರತದ ಕ್ರಿಕೆಟ್ ತಂಡಕ್ಕೆ ಈ ರೀತಿಯಾಗಿ ಮರಳಿರುವುದು ಸಂತಸ ತಂದಿದೆ. ನನ್ನ ಗುರಿ ಇರುವುದು ಒಂದೇ. ಭಾರತೀಯರು ಹೆಮ್ಮೆ ಪಡುವಂತ ಕೆಲಸ ಮಾಡುವುದು. 1.4 ಬಿಲಿಯನ್ ಭಾರತೀಯರ ಕನಸಿಗೆ ಹೆಗಲು ಕೊಡುವುದು’ ಎಂದು ಬರೆದುಕೊಂಡಿದ್ದಾರೆ.
ಈ ವಿಶ್ವಕಪ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿಯನ್ನು ಆಹ್ವಾನಿಸಿತ್ತು. ಸಾಕಷ್ಟು ಜನ ಈ ರೇಸಿನಲ್ಲಿ ಇದ್ದರು. ಆದರೆ ಅಂದು ಕೂಡ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರು ಮುಂದಿನ ಕೋಚ್ ಗೌತಮ್ ಗಂಭೀರ್ ಆಗಲಿದ್ದಾರೆ ಎಂದೇ ಸೂಚನೆ ನೀಡಿದ್ದರು. ಇದೀಗ ಗೌತಮ್ ಗಂಭೀರ್ ಅವರನ್ನೇ ಆಯ್ಕೆ ಮಾಡಲಾಗಿದೆ.