ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕಾಗಿ ಕಾದು ಕುಳಿತಿದ್ದರು. ಆದರೆ ಏಳನೇ ವೇತನ ಆಯೋಗ ಜಾರಿಯಾಗಲ್ಲ ಎಂಬುದನ್ನು ತಿಳಿಸಿದ ಮೇಲೆ ಸರ್ಕಾರಿ ನೌಕರರು ಕೋಪಗೊಂಡಿದ್ದಾರೆ. ಅನಿರ್ದಿಷ್ಟವಾಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಎಚ್ಚರಿಕೆಯನ್ನು ನೀಡಿದ್ದಾರೆ.
7ನೇ ವೇತನ ಆಯೋಗವು ಸರ್ಕಾರಕ್ಕೆ ಒಪ್ಪಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಎನ್.ಪಿ.ಎಸ್ ರದ್ದು ಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಆಯೋಗವೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್ಮೆಂಟ್ ಸೌಲಭ್ಯವನ್ನು ಜಾರಿಗೊಳಿಸಬೇಕು. ಕರ್ನಾಟಕ ಆರೋಗ್ಯ ಸಂಜೀವಿನಿಗೆ ಮರು ಚಾಲನೆ ನೀಡಬೇಕು ಸೇರಿದಂತೆ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರಿ ನೌಕರರು ಇಟ್ಟಿದ್ದಾರೆ.
ಜುಲೈ 14ರವರೆಗೆ ಆಯಾ ತಾಲೂಕು ಮತ್ತು ಜಿಲ್ಲಾ ಶಾಖೆಗಳು ನೌಕರರು – ಪದಾಧಿಕಾರಿಗಳು – ವೃಂದ ಸಂಘಗಳೊಂದಿಗೆ ಮನವಿ ಪತ್ರ ಸಲ್ಲಿಸುತ್ತಾರೆ. ಎರಡನರೆ ಹಂತವಾಗಿ ಜುಲೈ 3ನೇ ವಾರದಲ್ಲಿ ರಾಜ್ಯ ಕಾರ್ಯಕಾರಿ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ಸಭೆಯನ್ನು ಕರೆದು ಹೋರಾಟದ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಜುಲೈ 28ರ ಒಳಗೆ ಸಂಘದ ಪ್ರಮುಖ 3 ಬಡಿಕೆಗಳನ್ನು ಸರ್ಕಾರ ಈಡೇರಿಸದೆ ಇದ್ದಲ್ಲಿ ಅನಿವಾರ್ಯವಾಗಿ ಏ ಹಂತವಾಗಿ ಜುಲೈ ಕೊನೆಯ ವಾರದಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆ. ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.