ಬೆಂಗಳೂರು: ಈ ಮೊದಲು ಭಾಷಣದಲ್ಲಿ ರಾಮನಗರವನ್ನು ಅಭಿವೃದ್ಧಿ ಮಾಡಬೇಕು. ಅದು ಕೂಡ ಬೆಂಗಳೂರಿನಂತೆಯೇ ಆಗಬೇಕು ಎಂಬ ಆಸೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಿದ್ದರು. ಆದರೆ ಸ್ಪರ್ಧೆಯಲ್ಲಿ ಡಾ.ಮಂಜುನಾಥ್ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ಮತ್ತೆ ರಾಮನಗರ ಅಭಿವೃದ್ಧಿ ಬಗ್ಗೆ, ಹೆಸರು ಬದಲಾವಣೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
ವಿಶ್ವವೇ ಬೆಂಗಳೂರನ್ನು ತಿರುಗಿ ನೋಡುತ್ತಿದೆ. ಈಗಾಗಲೇ ಹೆಸರು ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಟ್ಟಿದ್ದೇನೆ. ಹೆಸರು ಬದಲಾದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಜಿಲ್ಲೆಯ ಹೆಸರು ಬದಲಾದ ಬಳಿಕ ಅಭಿವೃದ್ಧಿ ಕೂಡ ಆಗಲಿದೆ. ಪಕ್ಕದಲ್ಲಿಯೇ ಆಂಧ್ರಪ್ರದೇಶ, ತಮಿಳುನಾಡು ಇದೆ. ಹಾಗಾಗಿ ಕೈಗಾರಿಕೆಗಳಿಗೂ ಅನುಕೂಲವಾಗಲಿದೆ. ಬೆಂಗಳೂರು ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ನನ್ನ ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ, ಮನವಿ ಮಾಡಲಾಗಿದೆ.
ನಾವೆಲ್ಲಾ ಬೆಂಗಳೂರಿನವರೇ. ಮೊದಲು ಬೆಂಗಳೂರು ಜಿಲ್ಲೆಗೆ ರಾಮನಗರ ಸೇರಿತ್ತು. ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಕೋರಲಾಗಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಿಪಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆ. ಈಗಿರುವ ರಾಮನಗರವೇ ಹೆಡ್ ಕ್ವಾರ್ಟರ್ಸ್ ಆಗಲಿದೆ. ಮಾಗಡಿ, ಚನ್ನಪಟ್ಟಣ, ಹಾರೋಹಳ್ಳಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.