ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಲವು ಬಾರಿ ಜನತಾ ದರ್ಶನ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನ ತನ್ನ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಕೆಲವೊಂದು ಸಮಸ್ಯೆಗಳಿಗೆ ಸ್ಪಾಟ್ ನಲ್ಲಿಯೇ ಪರಿಹಾರ ಕೊಟ್ಟಿರುವುದು ಇದೆ. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಇಂದು ಮಂಡ್ಯದಲ್ಲಿ ಜನತಾ ದರ್ಶನ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
‘ಈ ಹಿಂದೆ ಅವರೇ ಆದೇಶ ಮಾಡಿದ್ದರು. ವಿಪಕ್ಷ ನಾಯಕರ ಸಭೆಗೆ ಅಧಿಕಾರಿಗಳು ಹೋಗಬಾರದು ಎಂದು. ಕುಮಾರಸ್ವಾಮಿಗಾಗಿ ಆದೇಶ ಮಾಡಿರುವುದಲ್ಲ ಅದು. ಹಿಂದೆಯಿಂದಲೂ ಇರುವುದನ್ನು ನಾವೂ ಮುಂದುವರೆಸಿದ್ದೀವಿ ಅಷ್ಟೇ. ಜನತಾ ದರ್ಶನ ಕಾರ್ಯಕ್ರಮವನ್ನು ಸಿಎಂ, ಡಿಸಿಎಂ ಮಾಡುವುದು ಎಂದಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವರಿಗೆ ಎಷ್ಟು ಶಿಷ್ಟಚಾರ ಪಾಲಿಸಬೇಕೋ ಅಷ್ಟನ್ನು ಪಾಲಿಸುತ್ತಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜನತಾ ದರ್ಶನ ಮಾಡಲಿ ಬಿಡಿ. ಜನರನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಗಳಿಗೂ ತಿರುಗಲಿ. ಬೇಡ ಎಂದವರು ಯಾರು. ನಮಗೂ ಇದಕ್ಕೂ ಸಂಬಂಧವೇ ಇಲ್ಲ. ನಮಗೆ ಈ ವಿಚಾರವೇ ಗೊತ್ತಿಲ್ಲ. ನಾವೂ ದೆಹಲಿಗೆ ಹೋಗಿ ಏನಾದರೂ ಮಾಡುವುದಕ್ಕೆ ಆಗುತ್ತಾ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮಂಡ್ಯ ಡಿಸಿ ಸೇರಿದಂತೆ ಯಾವ ಅಧಿಕಾರಿಯೂ ಈ ಜನತಾ ದರ್ಶನದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಆಕ್ರೋಶ ಹೊರ ಹಾಕಿದ್ದರು.