ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಲಿದೆ. ಹೀಗಾಗಿ ಪೊಲೀಸರು ಇಂದು ಮತ್ತೊಮ್ಮೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ನ್ಯಾಯಾಧೀಸರ ಎದುರು ಹಾಜರು ಪಡಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಪೊಲೀಸರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಜೂನ್ 22ರಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಅದರ ಅವಧಿ ಇಂದಿಗೆ ಮುಗಿದಿದೆ. ಆದರೆ ದರ್ಶನ್ ಪರ ವಕೀಲರು ಇನ್ನು ಕೂಡ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಓಡಾಡುತ್ತಿದ್ದು, ದರ್ಶನ್ ಅವರನ್ನು ಬಿಡೊಸಲೇಬೇಕೆಂದು ಪಣ ತೊಟ್ಟಿದ್ದಾರೆ. ಆದರೆ ವಕೀಲರು ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿಲ್ಲ. ಅದಕ್ಕೂ ಒಂದು ಕಾರಣವಿದೆ.
ದರ್ಶನ್ ಕೇಸಲ್ಲಿ ವಿಚಾರಣೆ ನಡೆಸಿರುವ ಪೊಲೀಸರು ಕೋರ್ಟ್ ಗೆ ಇನ್ನು ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಚಾರ್ಜ್ ಶೀಟ್ ಸಲಗಲಿಕೆ ಮಾಡದೆ ಹೋದರೆ ಜಾಮೀನು ಸಿಗುವುದು ಕಷ್ಟವಾಗುತ್ತದೆ. ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಹೀಗಾಗಿ ಪೊಲೀಸರು ಮೊದಲು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಜಾಮೀನು ಅರ್ಜಿ ಹಾಕುವುದಕ್ಕೆ ವಕೀಲರು ತೀರ್ಮಾನ ಮಾಡಿದ್ದಾರೆ. ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಒಂದು ವೇಳೆ ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡರೆ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ. ಹೀಗಾಗಿ ಇಂದು ನ್ಯಾಯಾಂಗ ಬಂಧನ ಅಂತ್ಯವಾದರೂ ಜಾಮೀನು ಅರ್ಜಿಯನ್ನು ಹಾಕಿಲ್ಲ.