ಬೆಂಗಳೂರು: ಸಿಎಂ ಧರ್ಮ ಪತ್ನಿ ಪಾರ್ವತಿ ಅವರ ಹೆಸರಲ್ಲೂ ಮೂಡ ಸೈಟುಗಳು ರಿಜಿಸ್ಟರ್ ಆಗಿದ್ದವು. ಇದನ್ನು ಖಂಡಿಸಿದ ವಿಪಕ್ಷದವರು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದರು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ನಾನ್ಯಾಕಪ್ಪ ರಾಜೀನಾಮೆ ನೀಡಬೇಕು. ಇದಕ್ಕೂ ನನಗೂ ಏನಪ್ಪ ಸಂಬಂಧ. ಅಶೋಕ್ ರಾಜೀನಾಮೆ ಕೇಳುತ್ತಾನೆ ಅಂತ ಕೊಟ್ಟು ಬಿಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಮೂಡಾ ಸೈಟ್ ಅಕ್ರಮದ ತನಿಖೆ ಮಾಡಲು ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಈ ಹಿಂದೆ ಬಿಜೆಪಿಯವರು ನಾವೂ ಕೇಳಿದಾಗ ಒಂದೇ ಒಂದು ಕೇಸನ್ನಾದರೂ ಸಿಬಿಐಗೆ ನೀಡಿದರಾ..? ನಾವೂ ಯಾಕೆ ಸಿಬಿಐಗೆ ಕೊಡಬೇಕು. ಸೈಟ್ ಹಂಚಿದ್ದು ಅವರದ್ದೇ ಸರ್ಕಾರ ಇದ್ದಾಗ. ದುರುಪಯೋಗ ಆಗಿದೆ ಅಂತ ಈಗ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಮೂಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ತನಿಲಕೆ ನಡೆಸಲಾಗುತ್ತಿದೆ.
ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಹೀಗಾಗಿ ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ, ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲವನ್ನು ಸಿಬಿಐಗೆ ಹಸ್ತಾಂತರ ಮಾಡಲು ಯಾಕೆ ಹೇಳುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನ ಸಿಬಿಐಗೆ ಹಸ್ತಾಂತರ ಮಾಡಿದ್ದರು. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ ಎಂದು ಮತ್ತೊಮ್ಮೆ ಧರ್ಮಪತ್ನಿ ಹೆಸರಲ್ಲಿರುವ ಸೈಟುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.