ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ.02 : ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಎತ್ತಿನ ಬಂಡಿಗಳ ಮೂಲಕ ಆಗಮಿಸಿದ ಕಾರ್ಯಕರ್ತರು ಹಾಗೂ ಮುಖಂಡರುಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಒಂದು ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿ ರೈತರು, ಬಡವರು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಇವರುಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಅನೇಕ ಯೋಜನೆಗಳನ್ನು ರದ್ದುಪಡಿಸಿದೆ. ರೈತರಿಗೆ ನೀಡಲಾಗುತ್ತಿದ್ದ ನಾಲ್ಕು ಸಾವಿರ ರೂ.ಗಳನ್ನು ನಿಲ್ಲಿಸಿದೆ. ರೈತ ಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವು ನೀಡುತ್ತಿದ್ದುದನ್ನು ರದ್ದುಪಡಿಸಿ ರೈತ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತುಪಡಿಸಿರುವುದರಿಂದ ಒಂದಲ್ಲ ಒಂದು ಹೋರಾಟ ನಡೆಯುತ್ತಲೆ ಇದೆ ಎಂದರು.
ಪೆಟ್ರೋಲ್-ಡೀಸೆಲ್, ಹಾಲು, ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ.ಗಳ ಹಗರಣ, ಇದೆ ರೀತಿ ಅಂಬೇಡ್ಕರ್, ಆದಿಜಾಂಬವ, ಭೋವಿ ನಿಮಗಳಲ್ಲಿಯೂ ಅವ್ಯವಹಾರವಾಗಿದೆ. ಖಜಾನೆಯಿಂದ ಎಂಬತ್ತು ಕೋಟಿ ರು.ವರ್ಗಾವಣೆಯಾಗಿದೆ. ಇದೆಲ್ಲಾ ರಾಜ್ಯದ ಮುಖ್ಯಮಂತ್ರಿಗೆ ಗೊತ್ತಿದ್ದರೂ ಏನು ಅರಿಯದವರಂತಿದ್ದಾರೆಂದು ಕಿಡಿ ಕಾರಿದರು.
ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಠಾಚಾರವೇ ಸಾಧನೆಯಾಗಿದೆ. ಹಾಲಿನ ಬೆಲೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಪೆಟ್ರೋಲ್-ಡೀಸೆಲ್ ಬೆಲೆ ದುಬಾರಿ, ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆ. ಒಟ್ಟಾರೆ ಇದೊಂದು ರೈತ ವಿರೋಧಿ ಸರ್ಕಾರವಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ. ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಮಾತನಾಡುತ್ತ ಬಿಜೆಪಿ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ಯೋಜನೆಗಳನ್ನೆಲ್ಲಾ ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿ ತೊಘಲಕ್ ದರ್ಬಾರ್ ನಡೆಸುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರಿಗೆ ಟ್ರಾನ್ಸ್‍ಫಾರ್ಮರ್ ಸಿಗುತ್ತಿಲ್ಲ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗಿದೆ. ಬಿಟ್ಟಿ ಭಾಗ್ಯಗಳಿಗೆ ಹಣ ಜೋಡಿಸಲು ಆಗದ ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರದಲ್ಲಿ ಮುಳುಗಿದೆ. 824 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದರ ಕಡೆ ಗಮನ ಕೊಡದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಕುರ್ಚಿ ಉಳಿಸಿಕೊಳ್ಳಲು ಕಿತ್ತಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರಾಜೇಶ್ ಬುರುಡೆಕಟ್ಟೆ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಹಾಲಿನ ಪ್ರೋತ್ಸಾಹ ಧನವೂ ಇಲ್ಲ. ಬರ ಪರಿಹಾರದ ಹಣವೂ ಕೈಸೇರಿಲ್ಲ. ಬಿತ್ತನೆ ಬೀಜದ ದರ ಏರಿಕೆಯಾಗಿದೆ. ಭೂಸಿರಿ ಯೋಜನೆ ನಿಂತಿದೆ. ರೈತ ಮಕ್ಕಳ ಶಿಕ್ಷಣಕ್ಕಾಗಿ ಜಾರಿಗೆ ತಂದ ವಿದ್ಯಾಸಿರಿ ಯೋಜನೆಯನ್ನು ರದ್ದುಪಡಿಸಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಹೇಳಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‍ಸಿದ್ದಾಪುರ, ಸಂಪತ್‍ಕುಮಾರ್, ಖಜಾಂಚಿ ಮಾಧುರಿ ಗಿರೀಶ್, ಕೆ.ಟಿ.ಕುಮಾರಸ್ವಾಮಿ, ನರೇಂದ್ರ ಹೊನ್ನಾಳ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ಪಾಲಯ್ಯ, ಸೂರಮ್ಮನಹಳ್ಳಿ ನಾಗರಾಜ್, ನಂದಿ ನಾಗರಾಜ್, ಸೀತಾರಾಮರೆಡ್ಡಿ, ಶಾರದಮ್ಮ, ಶ್ಯಾಮಲ ಶಿವಪ್ರಕಾಶ್, ಶೈಲಜಾರೆಡ್ಡಿ, ಸಿಂದೂ ತನಯ, ಟಿ.ಯಶವಂತಕುಮಾರ್, ಬೋಸೆ ರಂಗಪ್ಪ, ಕಿರಣ್ ಡಿ.ಎಸ್.ಹಳ್ಳಿ, ವೀರೇಶ್ ಜಾಲಿಕಟ್ಟೆ, ರಮೇಶ್, ವೀಣ, ಸಿದ್ದಾರ್ಥ, ಚಂದ್ರು, ಪವಿತ್ರ, ಶೀಲ ಶ್ರೀನಿವಾಸ್, ಅಂಕಳಪ್ಪ, ನಾಗರಾಜು, ಲಿಂಗರಾಜು, ಶಂಭು, ನಗರಸಭೆ ಸದಸ್ಯ ಹರೀಶ್, ವಿರುಪಾಕ್ಷ, ಟಿ.ಸಿ.ರಾಜಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.