ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಬದಲಾವಣೆ, ಡಿಸಿಎಂ ಹುದ್ದೆಗಳ ಹೆಚ್ಚಳದ್ದೇ ಸುದ್ದಿಯಾಗಿದೆ. ಸಿಎಂ ಸ್ಥಾನ ಬದಲಾವಣೆಯ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಂತ ವೈಮನಸ್ಸಾಗಲಿ, ಒಬ್ಬರಿಗೊಬ್ಬರು ವಿರೋಧ ಹೇಳಿಕೆ ಕೊಡುವುದಾಗಲಿ ಕಾಣಿಸುತ್ತಿಲ್ಲ. ಆದರೆ ಡಿಸಿಎಂ ಹುದ್ದೆಗಳ ಹೆಚ್ಚಳದ ಒತ್ತಡವನ್ನು ಮಣಿಸಲು ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ನೂತನ ನೇಮಕದ ಚಿಂತನೆ ನಡೆಸಿದೆ ಎನ್ನಲಾಗಿದೆ.
ಅಧಿವೇಶನದ ಬಳಿಕ ಕೆಪಿಸಿಸಿ ನೂತನ ಅಧ್ಯಕ್ಷರ ಬದಲಾವಣೆಯ ಸುಳಿವು ಸಿಕ್ಕಿದೆ. ಬದಲಾವಣೆಯ ಸುಳಿವು ಸಿಗುತ್ತಿದ್ದಂತೆ ಅಧ್ಯಕ್ಷಗಿರಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಈ ಬಾರಿ ಲಿಂಗಾಯತರಿಗೆ ನೀಡಬೇಕೆಂದು ಒತ್ತಾಯಗಳು ಕೇಳಿ ಬರುತ್ತಿವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ದಲಿತರಿಗೆ, ಬ್ರಾಹ್ಮಣರಿಗೆ, ಒಕ್ಕಲಿಗರಿಗೆ ಅವಕಾಶ ನೀಡಿ ಆಗಿದೆ. ಈಗ ಲಿಂಗಾಯತರಿಗೆ ನೀಡಿ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಬಿ.ಕೆ. ಹರಿಪ್ರಸಾದ್ ಲಾಬಿ ನಡೆಸುತ್ತಿದ್ದಾರೆ. ಅಲ್ಲದೇ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಹೆಸರುಗಳು ಮುನ್ನೆಲೆಗೆ ಬಂದಿವೆ. ಈಗಾಗಲೇ ನಾನು ಅಧ್ಯಕ್ಷನಾಗಲು ಸಿದ್ಧ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಮತ್ತೊಂದೆದೆ ಹಿಂದುಳಿದ ವರ್ಗಗಳ ಕೋಟಾದಡಿ ಬಿ.ಕೆ. ಹರಿಪ್ರಸಾದ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಜಾತಿ ಮತ್ತು ಪ್ರಾದೇಶಿಕ ಆಧಾರಿತವಾಗಿ ಅಧ್ಯಕ್ಷರ ಆಯ್ಕೆ ಮಾಡಲು ಹೈ ಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಾರಿ ಲಿಂಗಾಯತ ಹಾಗೂ ಕಲ್ಯಾಣ ಕರ್ನಾಟಕದ ನಾಯಕರಿಗೆ ಮಣೆ ಹಾಕುವ ಸಾಧ್ಯತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಅವರ ಹೆಸರು ಮುನ್ನೆಲೆಯಲ್ಲಿದೆ.