ಬೆಂಗಳೂರು: ಬೂದಿ ಮುಚ್ಚಿದ ಕೆಂಡದಂತೆ ಇದ್ದ ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ನಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಸ್ವಾಮೀಜಿಗಳು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದ ಮೇಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಅವರೇ ಈ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ಬೇಡ ಎಂದಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಪರವಾಗಿ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅವರು ಬ್ಯಾಟ್ ಬೀಸಿದ್ದಾರೆ.
ಸಿಎಂ ಬದಪಾವಣೆ ಬಗ್ಗೆ ಮಾತನಾಡಿದ ಜಿಟಿ ದೇವೇಗೌಡ ಅವರು, ಈ ಮೊದಲು ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿರಲಿಲ್ಲ. ಸಿದ್ದರಾಮಯ್ಯ ಅವರು ಸ್ಟ್ರಾಂಗ್ ಆಗಿದ್ದರು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿದೆ. ಹೀಗಾಗಿ ಕಾಂಗ್ರೆಸ್ ಹೈಕಾಂಡ್ ಮನಸ್ಸು ಮಾಡಿದರೆ ಡಿಕೆ ಶಿವಕುಮಾರ್ ಖಂಡಿತ ಸಿಎಂ ಆಗ್ತಾರೆ. ಹೈಕಾಂಡ್ ಏನು ತೀರ್ಮಾನ ಮಾಡುತ್ತೋ ಅದನ್ನು ಒಪ್ಪಿಕೊಳ್ಳುತ್ತೇನೆ ಅಂತ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈಗ ಹೈಕಮಾಂಡ್ ತೀರ್ಮಾನ ಮಾಡಿದರೆ ಡಿಕೆಶಿ ಸಿಎಂ ಆಗ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗುವಾಗಲೇ ಆರಂಭದಲ್ಲಿ ನಾನು ಸಿಎಂ ಆಮೇಲೆ ಡಿಕೆಶಿಗೆ ಬಿಟ್ಟು ಕೊಡುತ್ತೀನಿ ಅಂತಾನೇ ಮಾತು ಆಗಿತ್ತು ಎಂಬ ಮಾತು ಬಂದಿತ್ತು.
ಸಿದ್ದರಾಮಯ್ಯ ಅವರು ಸಿಎಂ ಆಗಬೇಕಾದರೆ ಕುರುಬ ಸಮುದಾಯದ ಮಠಾಧೀಶರು ಆಗ್ರಹ ಮಾಡಲಿಲ್ಲವೆ. ಅದೇ ರೀತಿ ಆ ಸಮಾಜದ ಅಭಿಮಾನದಿಂದ ಸ್ವಾಮೀಜಿ, ಡಿಕೆ ಶಿವಕುಮಾರ್ ಪರ ಮಾತನಾಡಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ವಿಪಕ್ಷಗಳ ಹೇಳಿಕೆ ಬಗ್ಗೆ ಮಾತನಾಡಿ, ಸರ್ಕಾರ ಬಿದ್ದೋಗಿ ಬಿಡುತ್ತೆ, ನಾವೂ ಬೀಳಿಸ್ತೀವಿ ಅಂತ ಹೇಳಲ್ಲ. ಸಂಪೂರ್ಣವಾಗಿ ಬಹುಮತ ಇರುವಂತ ಸರ್ಕಾರವನ್ನು ನಾವೂ ಬೀಳಿಸ್ತೀವಿ ಅಂತ ಹೇಳಲ್ಲ. ಅವರಲ್ಲಿ ದಢೀರ್ ಭಿನ್ನಾಭಿಪ್ರಾಯ ಬಂದರೆ ಸರ್ಕಾರ ಬೀಳಬಹುದು ಎಂದಿದ್ದಾರೆ.