ಬೆಂಗಳೂರು : ಶಿವಮೊಗ್ಗದ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯ ಬಳಿಕ ನಿಗಮದ ಹಗರಣ ಬೆಳಕಿಗೆ ಬಂದಿತ್ತು. ಸುಮಾರು 186 ಕೋಟಿ ರೂಪಾಯಿ ಹಗರಣದ ಪ್ರಕರಣ ಇದಾಗಿತ್ತು. ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಮೇಲೆ ಸಂಬಂಧ ಪಟ್ಟ ಸಚಿವರ ತಲೆದಂಡವೂ ಆಗಿತ್ತು. ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇದೀಗ ಸಿಬಿಐನಿಂದ ಬಂಧನದ ಭೀತಿಯಲ್ಲಿದ್ದಾರೆ.
ಈ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿತ್ತು. ಆದರೆ ಸಿಬಿಐ ಕೂಡ ಎಂಟ್ರಿ ಕೊಟ್ಟಿದ್ದು, ಪ್ರಕರಣದ ತನಿಖೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದೆ. ಈಗಾಗಲೇ ಜೈಲಿನಲ್ಲಿರುವ ಆರೋಪಿಗಳ ವಿಚಾರಣೆಯನ್ನು ನಡೆಸಿ, ಹೇಳಿಕೆಗಳನ್ನು ದಾಖಲಿಸಿದೆ. ಈ ನಡುವೆ ಮಾಜಿ ಸಚಿವ ನಾಗೇಂದ್ರ ಅಂಡ್ ಟೀಂ ಪ್ರಕರಣದಲ್ಲಿ ತಮ್ಮ ಹೆಸರು ಹೇಳದಂತೆ ಆರೋಪಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಆರೋಪಿಯೊಬ್ಬ ನ್ಯಾಯಾಧೀಶರ ಎದುರೇ ಈ ಬಗ್ಗೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಸಾಕ್ಷ್ಯ ನಾಶ ಹಾಗೂ ಆರೋಪಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಗೇಂದ್ರಗೆ ಸಂಕಷ್ಟ ಎದುರಾಗಿದೆ.
ನೂರಕ್ಕೂ ಅಧಿಕ ಕೋಟಿ ಅವ್ಯವಹಾರ ನಡೆದಿರುವ ಕಾರಣ ಸಿಬಿಐ ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ಅತ್ತ ಎಸ್ಐಟಿ ಕೂಡ ತನಿಖೆಯನ್ನು ಚುರುಕುಗೊಳಿಸಿದೆ. ಆತ್ಮಹತ್ಯೆಗೆ ಶರಣಾದ ಅಧೀಕ್ಷಕ ಚಂದ್ರಶೇಖರ್ ಡೆತ್ ನೋಟ್ ನಲ್ಲಿ ಬರೆದಿದ್ದಂತ ಸಾಯಿತೇಜ್ ಎಂಬುವವರನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಎಸ್ಐಟಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಬಿ.ನಾಗೇಂದ್ರ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷದ ಕಾರ್ಯಕ್ರಮದಲ್ಲೂ ಆಕ್ಟೀವ್ ಆಗಿಲ್ಲ.