ಸುದ್ದಿಒನ್, ನವದೆಹಲಿ, ಜೂನ್.26 : ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಅವರ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕೊನೆಯಲ್ಲಿ ಅಸಾದುದ್ದೀನ್ ಓವೈಸಿ ಜೈ ಪ್ಯಾಲೆಸ್ತೀನ್ ಎಂದಿದ್ದರು. ಅವರ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಪಕ್ಷದ ಮುಖಂಡರು ಸ್ಪೀಕರ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ.. ಇದೇ ವಿಚಾರವಾಗಿ ಕೆಲವರು ನ್ಯಾಯವಾದಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ದೂರು ನೀಡಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅಸಾದುದ್ದೀನ್ ಓವೈಸಿ ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ ಮತ್ತು ಜೈ ಪ್ಯಾಲೆಸ್ತೀನ್ ಎಂಬ ಘೋಷಣೆಗಳನ್ನು ಕೂಗಿದರು. ಆದರೆ ಬಿಜೆಪಿ ನಾಯಕರು ನಮ್ಮ ದೇಶದ ಲೋಕಸಭೆಯಲ್ಲಿ ಜೈ ಪ್ಯಾಲೆಸ್ತೀನ್ ಹೇಳುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕ್ಷಣಕಾಲ ಗೊಂದಲ ಉಂಟಾಯಿತು. ಅಸಾದುದ್ದೀನ್ ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲಾಗುವುದು ಎಂದು ಹಂಗಾಮಿ ಸ್ಪೀಕರ್ ಹೇಳಿದ ನಂತರ ಬಿಜೆಪಿ ಸದಸ್ಯರು ಸುಮ್ಮನಾದರು.
ಆದರೆ ಪ್ರಸ್ತುತ ನಿಯಮಗಳ ಪ್ರಕಾರ ಪ್ಯಾಲೆಸ್ತೀನ್‌ಗೆ ಸಂಬಂಧಿಸಿದ ಅಸಾದುದ್ದೀನ್ ಓವೈಸಿ ಈ ಹೇಳಿಕೆಯಿಂದ ಅವರು ಲೋಕಸಭೆ ಸದಸ್ಯತ್ವಕ್ಕೆ ಅನರ್ಹರಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸಂವಿಧಾನದ ಪರಿಚ್ಛೇದ 102 (ಡಿ) ಅಡಿಯಲ್ಲಿ ಅಸಾದುದ್ದೀನ್ ಓವೈಸಿಯನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.
ಇದೇ ವಿಚಾರವಾಗಿ ದೇಶದ ಹಲವು ವಕೀಲರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ದೂರು ನೀಡಿದ್ದಾರೆ. ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಅವರು ಪ್ಯಾಲೆಸ್ತೀನ್ ಪರವಾಗಿ ಘೋಷಣೆ ಕೂಗಿದ್ದಕ್ಕೆ ಸುಪ್ರೀಂ ಕೋರ್ಟ್ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಸಮಗ್ರತೆ ಮತ್ತು ನಿಷ್ಠೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ದೂರಿನ ಪ್ರಕಾರ, ಸಂವಿಧಾನದ 102 (ಡಿ) ವಿಧಿ ಅಡಿಯಲ್ಲಿ ಅಸಾದುದ್ದೀನ್ ಓವೈಸಿ ಅವರನ್ನು ಸಂಸತ್ತಿನ ಸದಸ್ಯರಾಗಿ ತಕ್ಷಣವೇ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಸಾದುದ್ದೀನ್ ಓವೈಸಿ ಪ್ಯಾಲೆಸ್ತೀನ್‌ಗೆ ನಿಷ್ಠೆಯನ್ನು ತೋರಿಸುತ್ತಿದ್ದಾರೆ ಇವರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ವಿಷ್ಣು ಶಂಕರ್ ಜೈನ್ ಕೂಡ ಓವೈಸಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ.
ಮತ್ತೊಂದೆಡೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ಯಾಲೆಸ್ತೀನ್ ಪರವಾಗಿ ಅಸಾದುದ್ದೀನ್ ಘೋಷಣೆ ಕೂಗಿರುವ ಬಗ್ಗೆ ದೂರುಗಳು ಬಂದಿವೆ. ನಿಯಮಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಭಾರತಕ್ಕೆ ಪ್ಯಾಲೆಸ್ತೀನ್ ಅಥವಾ ಇನ್ಯಾವುದೇ ದೇಶದೊಂದಿಗೆ ಯಾವುದೇ ದ್ವೇಷವಿಲ್ಲ. ಆದರೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಬೇರೆ ದೇಶವನ್ನು ಹೊಗಳಿ ಘೋಷಣೆ ಕೂಗುವುದು ಸರಿಯೇ ಎಂಬುದನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಆರ್ಟಿಕಲ್ 102 (ಡಿ) ಏನು ಹೇಳುತ್ತದೆ ?
ಭಾರತದ ಸಂವಿಧಾನದ 102 ನೇ ವಿಧಿಯು ಸಂಸತ್ತಿನ ಸದಸ್ಯರ ಅನರ್ಹತೆ ಮತ್ತು ಕರ್ತವ್ಯಗಳನ್ನು ತಿಳಿಸುತ್ತದೆ. ಆರ್ಟಿಕಲ್ 102 ರ ಕಲಂ (ಡಿ) ಪ್ರಕಾರ ಸಂಸತ್ತಿನಲ್ಲಿ, ಸ್ವಯಂಪ್ರೇರಣೆಯಿಂದ ವಿದೇಶಿ ಪೌರತ್ವವನ್ನು ಪಡೆದಿರುವ ಅಥವಾ ಯಾವುದೇ ಇತರ ದೇಶಕ್ಕೆ ನಿಷ್ಠೆಯನ್ನು ಘೋಷಿಸುವ ಭಾರತದ ನಾಗರಿಕನಾಗಿರಲಿ ಅಥವಾ ಇಲ್ಲದಿರಲಿ ಶಾಸಕಾಂಗದ ಯಾವುದೇ ಸದಸ್ಯರು ದೋಷಾರೋಪಣೆ ಮಾಡಬಹುದಾಗಿದೆ ಎಂದು ಹೇಳುತ್ತದೆ.