ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್.25 : ದಲಿತರ ಮೇಲೆ ನಡೆಯುತ್ತಿರುವ ಶೋಷಣೆ, ಅನ್ಯಾಯದ ವಿರುದ್ದ ಹೋರಾಡುವುದಕ್ಕಾಗಿಯೇ ದಲಿತ ಚಳುವಳಿಯನ್ನು ಹುಟ್ಟುಹಾಕಿ ಹೋರಾಟಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು ಅಮರರಾದ ಪ್ರೊ.ಬಿ.ಕೃಷ್ಣಪ್ಪನವರ 86 ನೇ ಜಯಂತಿ ಅಂಗವಾಗಿ ಜು.10 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ದಲಿತ ಚಳುವಳಿಯ ಐವತ್ತು ವರ್ಷಗಳ ಸಂಭ್ರಮೋತ್ಸವಕ್ಕೆ ಜಿಲ್ಲೆಯಿಂದ ದಲಿತರು ಪಾಲ್ಗೊಳ್ಳುವ ಕುರಿತು ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಭೆ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಪ್ರೊ.ಬಿ.ಕೃಷ್ಣಪ್ಪನವರು ದಲಿತ ಚಳುವಳಿಯನ್ನು ಕಟ್ಟಿ ಐವತ್ತು ವರ್ಷಗಳಾಗಿರುವ ನೆನಪಿಗಾಗಿ ಬೆಂಗಳೂರಿನಲ್ಲಿ ಆಚರಿಸಲಾಗುವ ಸಂಭ್ರಮೋತ್ಸವಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕರ್ನಾಟಕ ದಲಿತ ಚಳುವಳಿಗೆ ಇತಿಹಾಸವಿದೆ ಎನ್ನುವುದಾದರೆ ಅದಕ್ಕೆ ಪ್ರೊ.ಬಿ.ಕೃಷ್ಣಪ್ಪನವರ ಹೋರಾಟವೇ ಕಾರಣ.
1974 ರಲ್ಲಿ ಭದ್ರಾವತಿಯಲ್ಲಿ ದಲಿತ ಚಳುವಳಿಯನ್ನು ಹುಟ್ಟುಹಾಕಿ ಅಂದಿನಿಂದ ದಲಿತರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ನಿಸ್ವಾರ್ಥವಾಗಿ ಶ್ರಮಿಸಿದ ಪ್ರೊ.ಬಿ.ಕೃಷ್ಣಪ್ಪನವರ ಆದರ್ಶ ತತ್ವ ಸಿದ್ದಾಂತಗಳ ಮೇಲೆ ದಲಿತರು ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಮುನ್ನೂರಕ್ಕೂ ಹೆಚ್ಚು ದಲಿತರು ಪಾಲ್ಗೊಳ್ಳಬೇಕೆಂದು ಕೆಂಗುಂಟೆ ಜಯಪ್ಪ ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಳ್ಳಕೆರೆ ತಾಲ್ಲೂಕು ಸಂಚಾಲಕ ವಿಜಯಕುಮಾರ್, ಮೊಳಕಾಲ್ಮುರು ತಾಲ್ಲೂಕು ಸಂಚಾಲಕ ಕರಿಬಸಪ್ಪ, ಹೊಳಲ್ಕೆರೆ ತಾಲ್ಲೂಕು ಸಂಚಾಲಕ ಸುಂದರಮೂರ್ತಿ, ಹಿರಿಯೂರು ತಾಲ್ಲೂಕು ಸಂಚಾಲಕ ರಘುನಾಥ್, ನವೀನ್ ಮದ್ದೇರು, ಶಿವಣ್ಣ ಮುತ್ತುಗದೂರು, ಶ್ರೀನಿವಾಸ್, ಕದ್ರಪ್ಪ ಗುಂಡಿಮಡು ಮಂಜಣ್ಣ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.