ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ದಿಢೀರನೇ ಟೆಂಪಲ್ ರನ್ ಶುರು ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಮುಗಿದು, ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಯಡಿಯೂರಪ್ಪ ಅವರು ದೇವಸ್ಥಾನಗಳನ್ನು ಸುತ್ತುತ್ತಾ ಉದ್ದಾರೆ. ಇಂದು ಬೆಳಗ್ಗೆಯೇ ಧರ್ಮಸ್ಥಳದ ಶ್ರೀಮಂಜುನಾಥನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ಯಡಿಯೂರಪ್ಪ ಅವರು, ಬಹಳ ವರ್ಷಗಳ ಬಳಿಕ ಮಂಜುನಾಥನ ದರ್ಶನ ಪಡೆದಿದ್ದೇನೆ. ಹೆಗ್ಡೆಯವರ ಆಶೀರ್ವಾದವನ್ನು ಪಡೆದಿದ್ದೇನೆ. ನಮ್ಮ ಭಾಗದಲ್ಲಿ ಒಂದು ರೀತಿಯ ಬರಗಾಲವಿದ್ದು, ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮುಂಬರುವ ದಿನಗಳು ಒಳ್ಳೆಯ ದಿನಗಳಾಗಿರುತ್ತವೆ ಎಂದಿದ್ದಾರೆ. ಯಡಿಯೂರಪ್ಪ ಅವರ ಜೊತೆಗೆ ಶಾಸಜ ಹರೀಶ್ ಪೂಂಜಾ, ಶ್ರೀನಿವಾಸ್ ರಾವ್, ಜಯಂತ್ ಕೋಟ್ಯಾನ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು, ಬಳಿಕ ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿದ ಬಳಿಕ ಯಡಿಯೂರಪ್ಪ ಅವರು ಕುಕ್ಕೆಗೆ ಪಯಣ ಬೆಳೆಸಿದ್ದಾರೆ. ಅಲ್ಲಿ ನಾಣ್ಯಗಳ ತುಲಭಾರ ಸೇವೆಯನ್ನು ಸಲ್ಲಿಸಿದರು. ದೇವಾಲಯದ ಅರ್ಚಕರು ಈ ಸೇವೆಯನ್ನು ನೆರವೇರಿಸಿಕೊಟ್ಟರು. ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ವಾಗತಿಸಿದರು. ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಮತ್ತು ದೇವಸ್ಥಾನದ ಸಮಿತಿಯವರು ಇದ್ದರು. ಮಧ್ಯಾಹ್ನ ಯಡಿಯೂರಪ್ಪನವರು ಸುಳ್ಯದ ಬಿಜೆಪಿ ಕಛೇರಿ ಉದ್ಘಾಟಿಸಲಿದ್ದಾರೆ. ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪ ಅವರು ರಾಜ್ಯದ ದೇವಸ್ಥಾನಗಳತ್ತ ನಡೆಯುತ್ತಿದ್ದಾರೆ.