ಬೆಂಗಳೂರು: ಇಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಮುಸ್ಲಿಂರೆಲ್ಲ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಬ್ಬರಿಗೊಬ್ಬರು ಶುಭಕೋರಿದ್ದಾರೆ. ಚಾಮರಾಜನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಇಡೀ ಭಾರತದಲ್ಲಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ನೀವೆಲ್ಲರೂ ಪ್ರಾರ್ಥನೆ ಮಾಡಿದ್ದೀರಿ ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ಎಲ್ಲಾ ಭಾಷೆ, ಧರ್ಮಕ್ಕೆ ಸಮಾನತೆ ಕೊಡುವ ಬಹುತ್ವದ ದೇಶವಿದು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗಲೇ ರಾಷ್ಟ್ರ ಮತ್ತು ಸಮಾಜದ ಏಳ್ಗೆಯಾಗುವುದು. ನಾವೂ ಸಂವಿಧಾನದ ಮೇಲೆ ನಂಬಿಕೆ ಇಟ್ಟವರು, ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದರು.
ಎಲ್ಲೆಡೆ ಇಂದು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಮುಸ್ಲಿಂರೆಲ್ಲ ಸೇರಿ ಭಾವೈಕ್ಯತೆಯಿಂದ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಶಿವಮೊಗ್ಗ, ವಿಜಯನಗರದ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಈದ್ಗಾ ಮೈದಾನ, ಬಳ್ಳಾರಿಯ ಈದ್ಗಾ ಮೈದಾನ, ಬೆಳಗಾವಿಯ ಅಂಜುಮನ್ ಮೈದಾನ, ಬಾಗಲಕೋಡರಯ ಮುಧೋಳ ನಗರ, ಮೈಸೂರು ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲಾ ಕಡೆಯೂ ಹಬ್ಬವನ್ನು ಆಚರಣೆ ಮಾಡಲಾಗಿದೆ.