ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿಗರು ಇದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್, ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಆರೋಪಕ್ಕೆ ತಕ್ಕ ದಾಖಲೆ ಇದ್ದರೆ ಕೊಡಲಿ ಎಂದು ಆರ್ ಅಶೋಕ್ ಕೇಳಿದ್ದಾರೆ. ಈಗ ಆಡಳಿತದಲ್ಲಿರೋದು ದೇಶಭಕ್ತ ಮೋದಿ ಸರ್ಕಾರ. ಈಗ ಕಾಂಗ್ರೆಸ್ ನಲ್ಲಿ ಬಹಳ ಹಾಟ್ ಆಗಿದೆ. ಯಾರೇ ಆಗಲಿ ಸುಳ್ಳು ಹೇಳುವುದಕ್ಕೆ ಮಿತಿ ಇರಬೇಕು. ಬಿಟ್ ಕಾಯಿನ್ ನಲ್ಲಿ ಬಿಜೆಪಿಗರು ಇದ್ದಾರೆಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಅವರು ಹಾವಿಲ್ಲದ ಬುಟ್ಟಿಯನ್ನ ಇಟ್ಟುಕೊಂಡಿದ್ದಾರೆ.
ಮೋದಿ ಅಮೆರಿಕಾಗೆ ಹೋದಾಗ ಬಿಟ್ ಕಾಯಿನ್ ಬಗ್ಗೆ ಬೈಡನ್ ಹೇಳಿದ್ದರಂತೆ. ಬೈಡೆನ್ ಹೇಳುವಾಗ ಸುರ್ಜೇವಾಲ್ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ರಾಜ್ಯದಲ್ಲಿ ಅಷ್ಟೋ ಇಷ್ಟೋ ಉಳಿದಿದೆ. ಅದನ್ನು ಹಾಳು ಮಾಡಿಕೊಳ್ತಾರೆ. ಹೆಸರಿದೆ ಅಂತಾರೆ, ಅದ್ಯಾರ ಹೆಸರಿದೆ ರಿವೀಲ್ ಮಾಡಲಿ. ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮರು.
ಬಿಟ್ ಕಾಯಿನ್ ದಂಧೆಯಲ್ಲು ಸಿಕ್ಕಿಬಿದ್ದ ಬಳಿಕ ಶ್ರೀಕಿ ಜಾಮೀನು ಪಡೆಯುತ್ತಾನೆ. ಆಗೇಕೆ ಕಾಂಗ್ರೆಸ್ ಸಮಂಜಸ ವಾದ ಮಂಡಿಸಲಿಲ್ಲ. ಶ್ರೀಕಿಗೆ ಕೋರ್ಟ್ ಷರತ್ತು ಬದ್ಧ ಜಾಮೀನುವನೀಡಿದೆ. ಹೇಳಿದಾಗ ಹಾಜರಾಗಬೇಕೆಂದು ಸೂಚಿಸಿದೆ. ನಂತರ ನೀವ್ಯಾಕೆ ಶ್ರೀಕಿಯನ್ನ ಕರೆದು ವಿಚಾರಣೆ ನಡೆಸಲಿಲ್ಲ. ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಆರ್ ಅಶೋಕ್ ಪ್ರಶ್ನಿಸಿದ್ದಾರೆ.