ಬೆಂಗಳೂರು: ಪೋಕ್ಸೋ ಕೇಸ್ ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕೆಲವೇ ಕ್ಷಣಗಳಲ್ಲಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಫೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಕೇಸಿನ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ನಿಂದ ಜಾಮೀನು ರಹಿತ ವಾರೆಂಟ್ ಹೊರಡಿಸುವ ಬಗ್ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ. ಒಂದು ವೇಳೆ ಕೋರ್ಟ್ ವಾರೆಂಟ್ ನೀಡಿದರೆ ಪೊಲೀಸರು ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಿಎಸ್ ಯಡಿಯೂರಪ್ಪ ಅವರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗಳೊಂದಿಗೆ ಬಿಎಸ್ ಯಡಿಯೂರಪ್ಪ ಅವರ ಮನೆ ಬಳಿ ಹೋಗಿದ್ದರಂತೆ. ಅಳುತ್ತಾ ನಿಂತಿದ್ದ ಮಹಿಳೆಯರನ್ನು ಕರೆದು, ಸಮಸ್ಯೆ ಕೇಳಿ, ಸ್ವಲ್ಪ ಹಣವನ್ನು ಕೊಟ್ಟು ಕಳುಹಿಸಿದ್ದರಂತೆ. ಇದೇಮಹಿಳೆ ಪೊಲೀಸ್ ಠಾಣೆಗೆ ಬಂದು ನನ್ನ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ದೂರು ನೀಡಿದ್ದಳು. ಆದರೆ ಇತ್ತಿಚೆಗಷ್ಟೇ ಅನಾರೋಗ್ಯದಿಂದ ಈ ಮಹಿಳೆ ಸಾವನ್ನಪ್ಪಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಅಗತ್ಯ ಬಿದ್ದರೆ ಸಿಐಡಿ ಅವರು ಯಡಿಯೂರಪ್ಪ ಅವರನ್ನು ಬಂಧಿಸಬೇಕಾಗುತ್ತದೆ. ಯಡಿಯೂರಪ್ಪ ಅವರು ನೋಟೀಸ್ ಗೆ ಉತ್ತರ ನೀಡಬೇಕಾಗಿದೆ. ಜೂನ್ 15ರ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಾಗಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ನೋಟೀಸ್ ನೀಡಲಾಗಿದೆ. ಈ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ಸಿಐಡಿಯವರು ಬಂಧಿಸಬಹುದು ಎಂದಿದ್ದಾರೆ.