ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಹದಿಮೂರು ಮಂದಿ ಜೈಲಿನಲ್ಲಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಆದರೆ ಇದೀಗ ದಿಢೀರನೇ ತನಿಖಾಧಿಕಾರಿಯನ್ನು ಸರ್ಕಾರ ಬದಲಾವಣೆ ಮಾಡಿದೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ಕಾಮಾಕ್ಷಿಪಾಳ್ಯದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಈಗ ಬದಲಾಗುದ್ದು, ಆ ಜಾಗಕ್ಕೆ ವಿಜಯನಗರದ ಉಪವಿಭಾಗಾಧಿಕಾರಿ ಎಸಿಪಿ ಚಂದನ್ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಚಂದನ್ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ.
ಗಿರೀಶ್ ಈ ಮೊದಲು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ವರ್ಗಾವಣೆ ಮಾಡಲಾಗಿತ್ತು. ಆದರೆ ಇದೀಗ ವಾಪಾಸ್ ಅವರ ಠಾಣೆಗೆ ಹೋಗುವುದಕ್ಕೆ ಆದೇಶ ನೀಡಲಾಗಿದೆ. ಈ ಮಧ್ಯೆ ಕಾಮಾಕ್ಷಿಪಾಳ್ಯದ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆಯನ್ನು ಗಿರೀಶ್ ಬಹಳ ಗಂಭೀರವಾಗಿ ಪರಿಗಣಿಸಿದ್ದರು. ಈ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಬಂಧಿಸಿ, ಜೈಲಿಗೂ ಅಟ್ಟಿದ್ದಾರೆ.
ಇದೀಗ ಈ ಕೇಸನ್ನು ಚಂದನ್ ಮುಂದುವರೆಸಲಿದ್ದಾರೆ. ದರ್ಶನ್ ಮತ್ತವರ ಗ್ಯಾಂಗ್ ಅನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡಿದ್ದಾರೆ. ಈಗಾಗಲೇ ಕೊಲೆಯಾದ ಜಾಗದ ಮಹಜರು ಕೂಡ ಆಗಿದೆ. ಆರೋಪಿಗಳಿಂದ ಏನೆಲ್ಲಾ ಆಯ್ತು ಎಂಬ ಪಿನ್ ಟು ಪಿನ್ ಮಾಹಿತಿಯನ್ನು ಪಡೆಯಲಾಗಿದೆ. ನ್ಯಾಯಾಂಗ ಬಂಧನ ಮುಗಿಯುವುದರೊಳಗಾಗಿ ಕಲೆಹಾಕಿದ ಮಾಹಿತಿಯನ್ನೆಲ್ಲಾ ಕೋರ್ಟ್ ಮುಂದೆ ಇಡಲಿದ್ದಾರೆ. ಬಳಿಕ ಆರೋಪಿಗಳ ಶಿಕ್ಷೆಯ ಬಗ್ಗೆ ಕೋರ್ಟ್ ತೀರ್ಮಾನ ಮಾಡಲಿದೆ. ಅತ್ತ ಚಿತ್ರದುರ್ಗದಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡು ಪೋಷಕರು ದುಃಖದಲ್ಲಿದ್ದಾರೆ.