ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.14): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ವಾದ-ವಿವಾದಕ್ಕಿಂತ ಅದರಲ್ಲಿರುವ ಗುಣಾತ್ಮಕ ಅಂಶಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಹೆಚ್.ಲಿಂಗಪ್ಪ ಅಭಿಪ್ರಾಯಪಟ್ಟರು.
ಶ್ರೀಮತಿ ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 2020 ರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಅರ್ಥಶಾಸ್ತ್ರ ಪಠ್ಯಕ್ರಮ ವಿಶ್ಲೇಷಣೆಯ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಕುರಿತು ಸಾಕಷ್ಟು ಪರ-ವಿರೋಧಗಳು ಕೇಳಿ ಬರುತ್ತಿವೆ. ಎಲ್ಲಾ ಸಮುದಾಯಕ್ಕೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಕಲಿಯುವ ಸೌಭಾಗ್ಯವನ್ನು ಸರಿಯಾದ ಕ್ರಮದಲ್ಲಿ ನೀಡದಿದ್ದರೆ ಮತ್ತೆ ಹತ್ತಾರು ದಶಕಗಳ ಹಿಂದೆ ಹೋಗಬೇಕಾಗುತ್ತದೆ.
ಅಕ್ಷರ ಅಗತ್ಯವಿರುವುದರಿಂದ ಬಹುಸಂಖ್ಯಾತರ ಬಿಡುಗಡೆಗೆ ಪೂರಕವಾದ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿದರು.
ಭಾರತ ಏಳು ಲಕ್ಷ ಹಳ್ಳಿಗಳಿಂದ ಕೂಡಿರುವ ದೇಶ. ಗ್ರಾಮೀಣರಿಗೆ ತಂತ್ರಜ್ಞಾನದ ಪರಿಕರಗಳು ಲಭ್ಯವಾಗುವುದು ದುಸ್ತರ. ಕೆಳಹಂತದಿಂದ ಪರಿವರ್ತನೆಯಾಗಬೇಕಾಗಿರುವುದರಿಂದ ವಿಶೇಷವಾದ ತರಬೇತಿಗೆ ಆದ್ಯತೆ ನೀಡುವ ಮುಖೇನ ಮೌಲ್ಯಯುತ ಹಾಗೂ ಸಾಂಸ್ಕøತಿಕ ಶಿಕ್ಷಣಕ್ಕೆ ಒತ್ತು ಕೊಡಬೇಕಿದೆ ಎಂದು ಹೇಳಿದರು.
ಶ್ರೀಮತಿ ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಲತಾ ಎಸ್, ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಭೀಮಣ್ಣ ಸುಣಗಾರ್ ವೇದಿಕೆಯಲ್ಲಿದ್ದರು.