ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.14): ಇದೆ ತಿಂಗಳ 21 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸರಸ್ವತಿ ಶಿವಪ್ಪ ಚಿಮ್ಮಲಗಿ ಕನ್ನಡದ ಸೇವೆ ಮಾಡುವುದಕ್ಕಾಗಿ ನನಗೆ ಅಮೂಲ್ಯವಾದ ಮತಗಳನ್ನು ನೀಡಿ ಜಯಶಾಲಿಯನ್ನಾಗಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಯಾವುದೆ ರಾಜಕಾರಣ ಮಾಡಲು ಚುನಾವಣೆಗೆ ನಿಂತಿಲ್ಲ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿ ಕನ್ನಡದ ಸೇವೆ ಮಾಡುವುದಕ್ಕಾಗಿ 106 ವರ್ಷಗಳ ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಏಕೈಕ ಮಹಿಳೆಯಾಗಿದ್ದೇನೆ. ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಚರ್ಚಿಸುವುದು ನನ್ನ ಉದ್ದೇಶವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‍ನ ಬೈಲಾದಲ್ಲಿ ಕೆಲವು ತಿದ್ದುಪಡಿಗಳನ್ನು ಅತ್ಯವಶ್ಯಕವಾಗಿ ತರಬೇಕಿದೆ.
ರಾಜ್ಯ ಮಟ್ಟದಿಂದ ಹಳ್ಳಿಯವರೆಗೂ ಸಾಹಿತ್ಯ ಸರಸ್ವತಿಯನ್ನು ಕೊಂಡೊಯ್ಯಬೇಕಾಗಿದೆ. ರಾಜ್ಯದಲ್ಲಿ ಮೂರು ಲಕ್ಷದ ಹತ್ತು ಸಾವಿರ ಮತದಾರರಿದ್ದು, ಅದರಲ್ಲಿ ಸುಮಾರು 60 ಸಾವಿರ ಮಹಿಳಾ ಮತದಾರರಿದ್ದಾರೆ. ಗಡಿನಾಡು ಸಮಸ್ಯೆಗಳನ್ನು ಆಲಿಸಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ, ಗ್ರಂಥಾಲಯ ನಿರ್ಮಾಣಕ್ಕೆ ಒತ್ತು ನೀಡುವ ತುಡಿತ ನನ್ನದಾಗಿರುವುದರಿಂದ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕಿದೆ ಅಷ್ಟೆ ಎಂದು ವಿನಂತಿಸಿದರು.