ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಲೇ ಇದ್ದಾರೆ. ಅರೆಸ್ಟ್ ಆದಾಗಿನಿಂದ ಪ್ರಜ್ವಲ್ ರೇವಣ್ಣ ಅವರು ಹೊಟ್ಟೆ ನೋವಿನ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇನ್ನಷ್ಟು ದಿನ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ಭವಾನಿ ರೇವಣ್ಣ ಅವರಿಗೆ ರಿಲ್ಯಾಕ್ಸ್ ಆಗಿದೆ.
ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ಅವರು ಜೈಲು ಸೇರಿ, ಒಂದಷ್ಟು ದಿನಗಳ ಕಾಲ ಸೆರೆವಾಸ ಅನುಭವಿಸಿ ಬಂದಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಅದೇ ಪ್ರಕರಣದಲ್ಲಿ ಭವಾನಿ ಅವರಿಗೂ ಬಂಧನದ ಭೀತಿ ಕಾಡಿತ್ತು. ಹೀಗಾಗಿ ಯಾರಿಗೂ ಸಿಗದೆ ನಾಪತ್ತೆಯಾಗಿದ್ದರು. ಎಸ್ಐಟಿ ಅಧಿಕಾರಿಗಳು ಹುಡುಕಾಡಿದ್ದರು ಸಿಕ್ಕಿರಲಿಲ್ಲ. ಒಮ್ಮೆ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದ ಭವಾನಿ, ಬರಲೇ ಇಲ್ಲ. ಎಸ್ಐಟಿ ಅಧಿಕಾರಿಗಳ ಮುಂದೆ ಹೋದರೆ ಅರೆಸ್ಟ್ ಮಾಡುತ್ತಾರೇನೋ ಎಂಬ ಆತಂಕದಿಂದ ಬೇರೊಂದು ಕಡೆ ಉಳಿದುಕೊಂಡಿದ್ದರು. ಇದೀಗ ಭವಾನಿ ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದೆ. ಈಗಲಾದರೂ ಎಸ್ಐಟಿ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಾರಾ ನೋಡಬೇಕಿದೆ.
ಹೈಕೋರ್ಟ್ ನ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಹೀಗಾಗಿ 1 ಗಂಟೆ ವೇಳೆಗೆ SIT ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಜೊತೆಗೆ ತನಿಖೆಗೆ ಸಹಕರಿಸುವಂತೆ ಕೋರ್ಟ್ನಿಂದ ಸೂಚನೆ ಹೊರಡಿಸಲಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿಯಲ್ಲಿದ್ದು, ಕೋರ್ಟವ ಮಾತಿನಂತೆ ಭವಾನಿ ರೇವಣ್ಣ ಅವರು ತನಿಖೆಗೆ ಸಹಕಾರ ನೀಡುತ್ತಾರಾ ಎಂಬುದನ್ನು ನೋಡಬೇಕಿದೆ.