ಸುದ್ದಿಒನ್, ಚಿತ್ರದುರ್ಗ : ಗಿಡವೊಂದನ್ನು ನೆಟ್ಟು ಬೆಳೆಸುವುದೆಂದರೆ ಜೀವನ ಪ್ರೀತಿ ಗಳಿಸಿಕೊಂಡಂತೆ, ಭೂಮಿಯ ಉಳಿವಿಗೆ ಕೈಜೋಡಿಸಿದಂತೆ, ಜೀವ ವಾಯು-ಜೀವ ಜಲವನ್ನು ಅಮೃತಗೊಳಿಸಿದಂತೆ. ಇದನ್ನು ಮನಗಂಡು ಪರಿಸರದ ಸಂರಕ್ಷಣೆಯ ಕ್ರಮಗಳು ಪ್ರತಿ ದಿನ ಪ್ರತಿ ಕ್ಷಣ ನಮ್ಮ ಬದುಕಿನ ವಿಧಾನವಾಗಬೇಕು” ಎಂದು ಸಾಹಿತಿ ಮತ್ತು ಆರ್ಥಿಕ ಚಿಂತಕ ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.
ಅವರು ಬುಧವಾರ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ “ವಿಶ್ವ ಪರಿಸರ ದಿನಾಚರಣೆ” ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು,”ಅನಾಥಸೇವಾಶ್ರಮ ಕಟ್ಟಿದ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಯೋಗ ಮತ್ತು ಆಯುರ್ವೇದವನ್ನು ತಮ್ಮ ಉಸಿರಾಗಿಸಿಕೊಂಡು ವಿದ್ಯಾಸಂಸ್ಥೆಗಳನ್ನ ಸ್ಥಾಪಿಸಿ ಹಿಂದುಳಿದ ಪ್ರದೇಶದ ಜನರ ಸರ್ವತೋಮುಖ ಬೆಳವಣಿಗೆಗೆ ಕಾರಣವಾದವರು. ಆಯುರ್ವೇದ ಎಂದರೆ ಸಸ್ಯಮೂಲ ವೈದ್ಯಕೀಯ ಚಿಕಿತ್ಸೆ. ಆಯುರ್ವೇದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಸ್ಯಗಳೊಂದಿಗಿನ ಒಡನಾಟವೇ ಅವರ ವೃತ್ತಿ ಬದುಕಿನ ಶ್ರೀಮಂತಿಕೆ. ಗಿಡ ಮರಗಳ ಪರಿಸರವೇ ಗೋಡೆರಹಿತ ಪ್ರಯೋಗಾಲಯ. ಸಸ್ಯ ಸಂಮೃದ್ಧಿಯೇ ಪಠ್ಯ ಪುಸ್ತಕ” ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ “ಪ್ರಕೃತಿಯನ್ನು ಉಳಿಸಿ ಭೂಗೋಲವನ್ನು ರಕ್ಷಿಸುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದೇ ವಿಶ್ವ ಪರಿಸರ ದಿನಾಚರಣೆಯ ಉದ್ದೇಶವಾಗಿದೆ. ಪರಿಸರದ ಉಳಿವು ಮನುಕುಲದ ಉಳಿವು, ಪರಿಸರದ ನಾಶ ಮನುಕುಲದ ನಾಶ” ಎಂದರು.
ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಕಾರ್ಯದರ್ಶಿ ಶ್ರೀ ಎಸ್.ಕೆ.ಬಸವರಾಜನ್ ಅವರು ಆರಂಭದಲ್ಲಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಸದಸ್ಯರಾದ ರಾಜಪ್ಪ, ಸುಧಾಕರ್ ಮತ್ತು ಕೆಂಗುಂಟೆ ಜಯ್ಯಣ್ಣ, ವ್ಯವಸ್ಥಾಪಕರಾದ ಡಿ.ಕೆ.ಚಂದ್ರಪ್ಪ, ಶ್ರೀ ರಾಘವೇಂದ್ರ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಪತಿ, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಔಷಧಿ ಸಸ್ಯಗಳನ್ನು ಒಳಗೊಂಡಂತೆ ಸುಮಾರು ಒಂದು ಸಾವಿರ ವಿವಿಧ ಬಗೆಯ ಸಸಿಗಳನ್ನು ಆಶ್ರಮದ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ನೆಡಿಸಿ ಅವುಗಳ ಪೋಷಣೆಯ ಜವಾಬ್ದಾರಿ ವಹಿಸಲಾಯಿತು.