ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಅಧಿಕಾರಿಗಳ ಅರೆಸ್ಟ್ ಮಾಡಲಾಗಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ 89 ಕೋಟಿಯ ಅವ್ಯವಹಾರದ ಹಗರಣ ಕೇಳಿ ಬಂದಿತ್ತು. ಈ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಇದೆ. ಈ ಸಂಬಂಧ ವಾಲ್ಮೀಕಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಎಸ್ಐಟಿಗೆ ವಹಿಸಿದೆ. ತನಿಖೆಯಲ್ಲಿ ಈಗಾಗಲೇ ನಿಗಮದ ಖಾತೆಯಿಂದ ಆರ್ಬಿಎಲ್ ಬ್ಯಾಂಕ್ ನಲ್ಲಿರುವ ಹತ್ತು ಖಾಸಗಿ ಕಂಪನಿಗಳು ಹಾಗೂ ಎಂಟು ವ್ಯಕ್ತಿಗಳ ವೈಯಕ್ತಿಕ ಖಾತೆಗಳಿಗೆ 89.62 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಹಗರಣ ಬೆಳಕಿಗೆ ಬಂದ ಬಳಿಕ ವಾಲ್ಮೀಕಿ ನಿಗಮದ ಅಧಿಕಾರಿಗಳು ನಾಪತ್ತೆಯಾಗಿದ್ದರು.
ಆದರೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ನಿನ್ನೆ ರಾತ್ರಿಯೇ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಪದ್ಮನಾಭ್ ಹಾಗೂ ಪರಶುರಾಮ್ ಬಂಧಿತ ಆರೋಪಿಗಳಾಗಿದ್ದಾರೆ. ಇಂದು ಮಧ್ಯಾಹ್ನ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಇದೆ. ಕೋರ್ಟ್ ನಲ್ಲಿ ಕಸ್ಟಡಿಗೆ ನೀಡುವ ಬಗ್ಗೆ ಮನವಿ ಮಾಡಲಿದ್ದು, ಬಳಿಕ ತನಿಖೆಯನ್ನು ನಡೆಸಲಿದೆ ಎನ್ನಲಾಗಿದೆ.
ಈ ಹಗರಣದ ಬಗ್ಗೆ ಈಗಾಗಲೇ ಸಚಿವ ನಾಗೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಕೇಳಿ ಶಾಕ್ ಆಗಿದೆ ಅಂತ. ಇನ್ನು ವಿಪಕ್ಷಗಳು ಸರ್ಕಾರದ ಮೇಲೆ ಹೌಹಾರಿದ್ದು, ನಿಗಮಕ್ಕೆ ಸಂಬಂಧಪಟ್ಟ ಸಚಿವರ ತಲೆದಂಡವಾಗಬೇಕು ಎಂದು ಒತ್ತಾಯಿಸಿದ್ದಾರೆ.