ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಕಡೆಗೂ ಅರೆಸ್ಟ್ ಆಗಿದ್ದಾರೆ. ಇಂದು ಮಧ್ಯರಾತ್ರಿಯೇ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಈಗ ಹಲವರಿಗೆ ಭಯ ಕಾಣಿಸಿಕೊಂಡಿದೆ. ಹಲವರು ಗಾಬರಿಯಾಗಿದ್ದಾರೆ. ಅದರಲ್ಲೂ ಮಾಜಿ ಶಾಸಕ ಸಾ.ರಾ ಮಹೇಶ್ ಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಹೆಚ್.ಡಿ.ರೇವಣ್ಣ ಅವರು ಮಹಿಳೆಯ ಕಿಡ್ನ್ಯಾಪ್ ಕೇಸಲ್ಲಿ ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದಾರೆ. ಇದೀಗ ಅದೇ ಕಿಡ್ನ್ಯಾಪ್ ಆದ ಮಹಿಳೆಯಿಂದ ಸಾರಾ ಮಹೇಶ್ ಅವರು ಪ್ರೆಸ್ ಮೀಟ್ ಮಾಡಿಸುವುದಕ್ಕೆ ಯೋಜನೆ ರೂಪಿಸಿದ್ದರಂತೆ. ಈ ಸಂಬಂಧ ಎಸ್ಐಟಿ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಕೂಡ ಉಲ್ಲೇಖಗೊಂಡಿದ್ದು, ಅವರಿಗೂ ನೋಟೀಸ್ ಕೊಡುವುದಕ್ಕೆ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಆರೋಪಿ ಕೀರ್ತಿ ಎಸ್ಐಟಿ ವಶದಲ್ಲಿ ಇದ್ದು, ಅಧಿಕಾರಿಗಳ ಮುಂದೆ ಈ ವಿಚಾರ ಬಾಯ್ಬಿಟ್ಟಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಹೋಗಿ ಸುದ್ದಿಗೋಷ್ಠಿ ಮಾಡಲು ಒತ್ತಾಯಿಸಿದರು. ನಾನು ಕಿಡ್ನ್ಯಾಪ್ ಆಗಿಲ್ಲ ಎಂದು ಹೇಳಿಸಲು ಪ್ರಯತ್ನಿಸಿದರು. ಆದರೆ ಅವತ್ತೆ ರೇವಣ್ಣ ಅವರನ್ನು ವಿಚಾರಣೆಗೆ ಕರೆದಿದ್ದಕ್ಕೆ ಸುದ್ದಿಗೋಷ್ಠಿ ರದ್ದಾಗಿತ್ತು ಎಂದು ಆರೋಪಿ ಕೀರ್ತಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾರಾ ಮಹೇಶ್ ಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇನ್ನು ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಎಸ್ಐಟಿ ವಶಕ್ಕೆ ಪಡೆದು, ತನಿಖೆಯ ನಿಯಮಗಳನ್ನು ಮುಂದುವರೆಸುತ್ತಿದೆ. ಮೊದಲಿಗೆ ಮೊಬೈಲ್ ವಶಕ್ಕೆ ಪಡೆದು, ಜರ್ಮನಿಯಲ್ಲಿದ್ದಾಗ ಸಹಾಯ ಮಾಡಿದವರು ಯಾರ್ಯಾರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.