ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ.27 : ದೇಶದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರುರವರು ಕೃಷಿ, ಶಿಕ್ಷಣ, ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ಕುಟುಂಬ ರಾಜಕಾರಣ ಎಂದಿಗೂ ಮಾಡಲಿಲ್ಲ. ಅವರ ನಿಧನದ ನಂತರ ಮಗಳು ಇಂದಿರಾಗಾಂಧಿ ದೇಶದ ಪ್ರಧಾನಿಯಾಗಬೇಕಾಯಿತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನೆಹರುರವರ ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಮಹಾತ್ಮಗಾಂಧಿ, ಮ್‍ಲಾನಾ ಅಬುಕಲಾಂ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಾಬುಜಗಜೀವನರಾಂ ಇವರುಗಳ ಜೊತೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ನೆಹರುರವರು ಎ.ಐ.ಸಿ.ಸಿ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ದೇಶ ಸಂಕಷ್ಟದಲ್ಲಿದ್ದ ಪರಿಸ್ಥಿತಿಯಲ್ಲಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದು ಅನೇಕ ಡ್ಯಾಂಗಳನ್ನು ಕಟ್ಟಿಸಿ ಸ್ಟೀಲ್ ಪ್ಲಾಂಟ್, ಕೈಗಾರಿಕೆ ಆರಂಭಿಸಿದರು. ಮೂರು ಅವಧಿಗೆ ದೇಶದ ಪ್ರಧಾನಿಯಾಗಿದ್ದ ನೆಹರುರವರಲ್ಲಿ ದೂರ ದೃಷ್ಟಿಯಿತ್ತು. ನೆಹರುರವರು ಕುಟಂಬ ರಾಜಕಾರಣ ಮಾಡಿದರೆಂದು ಕೋಮುವಾದಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ.
ದೇಶ ಹಾಗೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದುದರಿಂದ ಇಂದಿರಾಗಾಂಧಿ ಹತ್ಯೆ ನಂತರ ಅವರ ಪುತ್ರ ರಾಜೀವ್‍ಗಾಂಧಿ ದೇಶದ ಪ್ರಧಾನಿಯಾದರು. ಈಗ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕಗಾಂಧಿ ಇವರುಗಳು ಪಕ್ಷ ಉಳಿಸುವುದಕ್ಕಾಗಿ ಸಾರಥ್ಯ ವಹಿಸಿಕೊಂಡಿದ್ದಾರೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಚಿದಾನಂದಮೂರ್ತಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪದವೀಧರ ವಿಭಾಗದ ರಾಜ್ಯಾಧ್ಯಕ್ಷ ನಟರಾಜ್‍ಗೌಡರವರ ಆದೇಶದಂತೆ ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಹೊಸದುರ್ಗ ತಾಲ್ಲೂಕು ಲಕ್ಕಿಹಳ್ಳಿಯ ಮುರಳಿಧರ ಟಿ. ಇವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್‍ರವರು ಕಾಂಗ್ರೆಸ್ ಕಚೇರಿಯಲ್ಲಿ ಮುರಳಿಧರ ಟಿ. ರವರಿಗೆ ನೇಮಕಾತಿ ಪತ್ರ ನೀಡಿ ಪದವೀಧರ ವಿಭಾಗವನ್ನು ಸಂಘಟಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್‍ನವಾಜ್, ಶಬ್ಬೀರ್‍ಭಾಷ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್ ಈ ಸಂದರ್ಭದಲ್ಲಿ ಹಾಜರಿದ್ದರು.