ಬೆಂಗಳೂರು: ರಾಜ್ಯದೆಲ್ಲೆಡೆ ಇಂದು ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ ಹವಮಾನ ಇಲಾಖೆ. ಈಗಾಗಲೇ ಮಳೆ ಆರಂಭವಾದಾಗಿನಿಂದ ವಾತಾವರಣ ತಂಪಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದೆ. ಇಂದು ಕೂಡ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನಲ್ಲಿ ಮಳೆ ಬೀಳಲಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಈ ಸಂಬಂಧ ಈಗಾಗಲೇ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಶಿವಮೊಗ್ಗ, ತುಮಕೂರು, ವಿಜಯನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವ ಕಾರಣ ರೈತರು ಈಗಾಗಲೇ ಬಿತ್ತನೆಯ ಕಾರ್ಯ ಶುರು ಮಾಡಿದ್ದಾರೆ. ಹೊಲಗಳಿಗೆ ಎತ್ತುಗಳನ್ನು ಹೊಡೆದುಕೊಂಡು ಹೋಗಿ ಭೂಮಿಯನ್ನು ಹದ ಮಾಡುತ್ತಿದ್ದಾರೆ. ಕಳೆದ ವರ್ಷ ಮುಂಗಾರು, ಹಿಂಗಾರು ಕೈಕೊಟ್ಟ ಹಿನ್ನೆಲೆ ಬರ ಸೃಷ್ಠಿಯಾಗಿತ್ತು. ಆದರೆ ಈ ವರ್ಷ ಆರಂಭದಲ್ಲಿಯೇ ಮಳೆ ಜೋರಾಗಿರುವ ಕಾರಣ ರೈತರಲ್ಲಿ ಭರವಸೆ ಮೂಡಿದೆ. ಉತ್ತಮ ಮಳೆಯ ಜೊತೆಗೆ, ಬೆಳೆಯೂ ಆಗುವ ವಿಶ್ವಾಸದಲ್ಲಿದ್ದಾರೆ.