ಸುದ್ದಿಒನ್, ಚಿತ್ರದುರ್ಗ, (ಮೇ.24): ದೇವರ ದರ್ಶನ ಪಡೆದು ವಾಪಾಸ್ ಆಗುವಾಗ ಅಪಘಾತ ಸಂಭವಿಸಿ ಚಿತ್ರದುರ್ಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಮೃತ ಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಹಂಪಯ್ಯ (65), ಪ್ರೇಮ (58), ಮಂಜಯ್ಯ (60), ಪ್ರಭಾಕರ್ (45) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಕೂಕಿನ ಚಿಕ್ಕಜಾಜೂರುಅಂಚೆ ಚನ್ನಪಟ್ಟಣ ಗ್ರಾಮದವರು ಎಂದು ತಿಳಿದುಬಂದಿದೆ. ಒಂದೇ ಕುಟುಂಬದ ಒಟ್ಟು17 ಮಂದಿ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಭಕ್ತರು ಪ್ರಯಾಣಿಸುತ್ತಿದ್ದ ಓಮ್ನಿ ಕಾರಿಗೆ ಮೆಸ್ಕಾಂ ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಕೊಟ್ಟಿಗೆಹಾರ ದಾಟಿ ಸ್ವಲ್ಪ ದೂರ ಬಂದಾಗ ವಾಹನವೊಂದನ್ನು ಓವರ್ ಟೇಕ್ ಮಾಡಿ ಸಾಗುವಾಗ ಎದುರಿನಿಂದ ಬರುತ್ತಿದ್ದ ಮೆಸ್ಕಾಂ ಲಾರಿಗೆ ಓಮಿನಿ ಡಿಕ್ಕಿ ಹೊಡೆದಿದ್ದು, ಹಿಂದಿನಿಂದ ಬರುತ್ತಿದ್ದ ಅದೇ ಕುಟುಂಬದ ಆಲ್ಟೋ ಕಾರ್ ಓಮಿನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು ಓಮ್ನಿಯಲ್ಲಿದ್ದ ಮೂವರು ಪುರುಷರು ಮತ್ತು ಓರ್ವ ಮಹಿಳೆ ಮೃತಪಟ್ಟಿದ್ದು ಇತರೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಾಗಿರುವ ಮೂಡಿಗೆರೆ ಮಂಗಳೂರು ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದೆ. ಇಂದು ಸಂಜೆ ಸುಮಾರು ನಾಲ್ಕು ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಓಮ್ನಿ ಮತ್ತು ಆಲ್ಟೋ ಕಾರುಗಳು ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಲಾರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.