ಸುದ್ದಿಒನ್ : ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆರ್ ಸಿಬಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸುರಕ್ಷತೆಗೆ ದೊಡ್ಡ ಧಕ್ಕೆ ಎದುರಾಗಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಿದೆ. ಪತ್ರಿಕಾಗೋಷ್ಠಿಯನ್ನು ಸಹಾ ನಡೆಸಿಲ್ಲ. ಮಹತ್ವದ ಪಂದ್ಯಕ್ಕೂ ಮುನ್ನ ಫ್ರಾಂಚೈಸಿ ತೆಗೆದುಕೊಂಡಿರುವ ಈ ನಿರ್ಧಾರ ಆರ್‌ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಆರ್‌ಸಿಬಿ ಮತ್ತು ರಾಜಸ್ಥಾನ ನಡುವಿನ ಪಂದ್ಯಕ್ಕಾಗಿ ಉಭಯ ತಂಡಗಳು ಸೋಮವಾರ ಅಹಮದಾಬಾದ್‌ಗೆ ತಲುಪಿದವು.
ಆರ್‌ಸಿಬಿ ಕಳೆದ ಶನಿವಾರ ಚೆನ್ನೈ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿತ್ತು. ಆ ಬಳಿಕ ತಂಡಕ್ಕೆ ಭಾನುವಾರ ಮತ್ತು ಸೋಮವಾರ ವಿಶ್ರಾಂತಿ ಸಿಕ್ಕಿತ್ತು. ಆದಾಗ್ಯೂ, ಅಹಮದಾಬಾದ್ ತಲುಪಿದ ನಂತರ, ಆರ್ಸಿಬಿ ಎಲಿಮಿನೇಟರ್ ಪಂದ್ಯದ ಮೊದಲು ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿತು. ವಿರಾಟ್ ಕೊಹ್ಲಿಯ ಭದ್ರತೆಯಿಂದಾಗಿ ಆರ್‌ಸಿಬಿ ತನ್ನ ಅಭ್ಯಾಸವನ್ನು ರದ್ದುಗೊಳಿಸಿದೆ ಮತ್ತು ಎರಡು ತಂಡಗಳು ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಗುಜರಾತ್ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.
ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕೆಯ ಮೇಲೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಗುಜರಾತ್ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅವರಿಂದ ಶಸ್ತ್ರಾಸ್ತ್ರಗಳು, ಅನುಮಾನಾಸ್ಪದ ವೀಡಿಯೊಗಳು ಮತ್ತು ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ನಾಲ್ವರು ಭಯೋತ್ಪಾದಕರ ಬಂಧನದ ನಂತರ ಆರ್‌ಸಿಬಿ ಉದ್ವಿಗ್ನಗೊಂಡಿದೆ. ಈ ಕಾರಣದಿಂದಾಗಿ ವಿರಾಟ್ ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ. ಆದರೆ ಈ ಘಟನೆಯ ನಂತರವೂ ರಾಜಸ್ಥಾನ ತಂಡ ಮೈದಾನದಲ್ಲಿ ಅಭ್ಯಾಸ ನಡೆಸಿತು. ಮತ್ತೊಂದೆಡೆ ಮಾಧ್ಯಮಗೋಷ್ಠಿಯನ್ನು ಎರಡೂ ತಂಡಗಳು ರದ್ದುಗೊಳಿಸಿದವು. ಆರ್‌ಸಿಬಿ ಫ್ರಾಂಚೈಸಿಯಿಂದ ಅಭ್ಯಾಸದ ಅವಧಿಯನ್ನು ಏಕೆ ರದ್ದುಗೊಳಿಸಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಹೇಳಿಕೆ ಇಲ್ಲವಾದರೂ, ವಿರಾಟ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.