ಚಳ್ಳಕೆರೆ, (ನ.13) : ರಾಷ್ಟ್ರಕವಿ ಕುವೆಂಪು ಅವರ ವಿದ್ಯಾ ಗುರುಗಳಾದ ಟಿ.ಎಸ್. ವೆಂಕಟಣ್ಣಯ್ಯ ನೆಲ ಮೂಲದ ತಮ್ಮ ತಾಲೂಕಿನಲ್ಲಿ ಸಾಹಿತ್ಯ ಪ್ರತಿಭಾವಂತರು ಬೆಳೆಯುತ್ತಲೇ ಇದ್ದಾರೆ ಎಂದು ಹಿರಿಯ ಸಾಹಿತಿ ತಿಪ್ಪಣ್ಣಮರಿಕುಂಟೆ ಹೇಳಿದರು.
ನಗರದ ಹೊರವಲಯ ಸರ್ಕಾರಿ ಉಪಕರಣ ಕಾರ್ಯಗಾರ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ 16 ಭಾಷೆಗಳ ತೌಲಾನಿಕ ಅಧ್ಯಯನದಲ್ಲಿ ಕನ್ನಡ ಭಾಷೆಗೆ ಪಾರಂಪರಿಕ ಇತಿಹಾಸವಿದೆ. ಕನ್ನಡದಲ್ಲಿ ಹೊರತುಪಡಿಸಿ ಯಾವ ಭಾಷೆಯಲ್ಲೂ ಸಂಖ್ಯಾ ಬರಹವಿಲ್ಲ. ಇಂತಹ ಸರ್ವಶ್ರೇಷ್ಟ ಕನ್ನಡ ಭಾಷೆಗೆ ತನ್ನದೇ ಆದ ಅಂತಸತ್ವ ಇದೆ ಎಂದು ಹೇಳಿದರು.
ಪ್ರಸ್ತುತ ಸ್ಪರ್ಧಾ ಸಮಾಜದಲ್ಲಿ ಪರಿಶ್ರಮದಿಂದ ಸಾಧನೆ ಮಾಡಬೇಕಿದೆ. ಹೆತ್ತವರಿಗೆ ಮಾತ್ರ ನೀವು ಪ್ರೀತಿಯ ಮಕ್ಕಳಾಗಿರುತ್ತೀರಿ. ಸಮಾಜಕ್ಕೆ ಪ್ರತಿಸ್ಪರ್ಧಿಗಳಂತೆ ಬೆಳೆಯಬೇಕಾಗುತ್ತದೆ. ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡಿಕೊಳ್ಳುವ ಬದಲು, ಅಂಕಪಟ್ಟಿಯಲ್ಲಿ ವ್ಯಕ್ತಿತ್ವದ ಸಾಮಥ್ರ್ಯ ಕಂಡುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ತಿಪ್ಪೇಸ್ವಾಮಿ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ಕಲಿಕೆಗೆ ಅವಕಾಶವಿದೆ. ವಿದ್ಯಾರ್ಥಿಗಳಲ್ಲಿ ಹಿಂಜರಿಕೆಯಿಲ್ಲದೆ ವೃತ್ತಿಪರ ಶಿಕ್ಷಣ ಪಡೆದು ಸ್ವಯಂ ಉದ್ಯೋಗ ರೂಪಿಸಿಕೊಳ್ಳಬೇಕು. ಪಠ್ಯ ವಿಷಯಗಳನ್ನು ಕಂಠಪಾಠ ಮಾಡಿಕೊಳ್ಳುವ ಬದಲು ಮನಮುಟ್ಟುವ ರೀತಿ ಓದಿಕೊಳ್ಳುವ ಮೂಲಕ ಶಿಕ್ಷಣದಲ್ಲಿ ಸಾಧಕರಾಗಿ ಬೆಳೆಯಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣಾ ಅಭ್ಯರ್ಥಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಇರಬೇಕು. ತನ್ನ ಶಿಕ್ಷಣ ಜತೆಯಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು. ಇದರಿಂದ ಪಠ್ಯ ವಿಷಯಗಳನ್ನು ಆಂತರಿಕವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ತನ್ನ ಉದ್ಯೋಗ ಮತ್ತು ಕುಟುಂಬಕ್ಕೆ ಸೀಮಿತವಾಗದೆ ಸಮಾಜಮುಖಿಯಾಗಿ ಬೆಳೆಯಲು ಶಿಕ್ಷಣ ಆಧಾರವಾಗಬೇಕು ಎಂದು ಹೇಳಿದರು.
ಡಾ.ಕೆ. ಬೊಮ್ಮಣ್ಣ, ಉಪನ್ಯಾಸಕರಾದ ಅಶ್ವಿನ್‍ಕುಮಾರ್, ಮಲ್ಲಿಕಾರ್ಜುನ, ಚೇತನ್, ಸ್ವಾತಿ, ಸಾಮಾಜಿಕ ಹೋರಾಟಗಾರ ಯಾದಲಗಟ್ಟೆ ಜಗನ್ನಾಥ್, ಸ್ವಾತಿರಾಣಿ ಮತ್ತಿತರರು ಇದ್ದರು.