KSRTC ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ ಪ್ರತಿಸಲ ಒಂದು ಅನುಭವ ಆಗಿಯೇ ಇರುತ್ತೇ. ಯಾರಾದರೂ ಒಬ್ಬರು ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಕೊಟ್ಕೊಂಡು ಸಿನಿಮಾ ನೋಡೋದು, ಹಾಡು ಕೇಳೋದು ಮಾಡ್ತಾನೆ ಇರ್ತಾರೆ. ಇದು ಅಕ್ಕಪಕ್ಕ ಕುಳಿತ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತೆ. ಬಸ್ ನಲ್ಲಿ ಈ ರೀತಿ ಬೇರೆಯವರಿಗೆ ತೊಂದರೆ ಮಾಡಬಾರದು ಅಂತ ಹೇಳಿದ್ರು, ಜನ ಬದಲಾವಣೆ ಮಾಡಿಕೊಂಡಿಲ್ಲ. ಇದೀಗ ಪ್ರಯಾಣಿಕರಿಗೆ ತೊಂದರೆ ಮಾಡಿದರೆ, ತಕ್ಷಣ ಅಲ್ಲೇ ಬಸ್ಸ್ ನಿಲ್ಲಿಸಿ ಬಸ್ಸಿನಿಂದ ಕೆಳಗಿಳಿಸಲು ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ. ಕಿರಿಕಿರಿ ಮಾಡುವವರಿಗೆ ಟಿಕೆಟ್ ಹಣವನ್ನು ವಾಪಸ್ಸು ನೀಡದಿರಲು ನಿರ್ಧಾರ ಮಾಡಿದೆ.
ಆದೇಶ ಪ್ರತಿಯಲ್ಲಿ ಹೀಗಿದೆ:
ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ . ಈ ನಿಟ್ಟಿನಲ್ಲಿ ವಿವಿಧ ಮಾದರಿಯ ಸಾರಿಗೆ ಸೇವೆಗಳನ್ನು ರಾಜ್ಯದೊಳಗೆ ಮತ್ತು ನೆರೆ – ಹೊರೆಯ ಅಂತರ ರಾಜ್ಯ ಪ್ರದೇಶಗಳಲ್ಲಿ ಕಲ್ಪಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್ ದೂರವಾಣಿ ಮೇಲೆ ಬಹಳಷ್ಟು ಅವಲಂಬಿತರಾಗಿ ಮೊಬೈಲ್ ದೂರವಾಣಿ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕರು ಬಸ್ಸಿನಲ್ಲಿ ಮೊಬೈಲ್ ದೂರವಾಣಿಯಲ್ಲಿ ಜೋರಾಗಿ ಹಾಡು / ಪದ್ಯ / ವಾರ್ತೆ / ಸಿನಿಮಾ ಇತ್ಯಾದಿ ಹಾಕುತ್ತಿದ್ದು ಇದರಿಂದ ಶಬ್ದ ಮಾಲಿನ್ಯ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಇತರೆ ಸಹ ಪ್ರಯಾಣಿಕರಿಗೆ ತೊಂದರೆವುಂಟಾಗುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದಮಾಲಿನ್ಯ ನಿಯಂತ್ರಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ.
ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದ ಹೊರಸೂಸುವಂತ ಹಾಡು / ಪದ್ಯ / ವಾರ್ತೆ / ಸಿನಿಮಾ ಇತ್ಯಾದಿ ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುವುದರಿಂದ “ ನಿಗಮದ ಬಸ್ಸುಗಳಲ್ಲಿ ದೂರವಾಣಿಯ ಮೂಲಕ ಜೋರಾಗಿ ಹಾಡು / ಪದ್ಯ / ವಾರ್ತೆ / ಸಿನಿಮಾ ಇತ್ಯಾದಿ ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಈ ಸಂಬಂಧ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡುವುದು ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವಂತೆ ಮೊಬೈಲ್ ದೂರವಾಣಿ ಬಳಸುತ್ತಿದ್ದಲ್ಲಿ ಆ ರೀತಿ ಬಳಸದಂತೆ ವಿನಂತಿಸುವುದು. ಒಂದು ವೇಳೆ ಸದರಿ ಪ್ರಯಾಣಿಕ ವಿನಂತಿಗೆ ಮನ್ನಣೆ ನೀಡದೇ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಲ್ಲಿ ಸದರಿ ಪ್ರಯಾಣಿಕರನ್ನು ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಸ್ಥಳದಲ್ಲಿಯೇ ನಿಗಮದ ಬಸ್ಸಿನಿಂದ ಇಳಿಸುವುದು, ಸದರಿ ಪ್ರಯಾಣಿಕನು ಇಳಿಯುವವರೆಗೂ ವಾಹನವನ್ನು ನಿಲ್ಲಿಸುವುದು. ಅಂತಹ ಪ್ರಯಾಣಿಕರಿಗೆ ಹಣ ಹಿಂತಿರುಗಿಸುವಂತಿಲ್ಲ. ಪ್ರಯಾಣದರವನ್ನು ಈ ಸುತ್ತೋಲೆಯ ನಿರ್ದೇಶನಗಳು ತಕ್ಷಣದಿಂದ ಜಾರಿಗೆ ಬರುತ್ತವೆ.