ಸುದ್ದಿಒನ್ : ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 10) ಕೇಜ್ರಿವಾಲ್‌ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ವಿಚಾರಣೆ ವೇಳೆ ನ್ಯಾಯಾಲಯ ಎಲ್ಲಾ ವಾದಗಳನ್ನು ಆಲಿಸಿ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಮತ್ತೊಂದೆಡೆ, ದೆಹಲಿ ಸಿಎಂ ಬಂಧನದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಜುಲೈನಲ್ಲಿ ನಡೆಸಬೇಕು ಎಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಒತ್ತಾಯಿಸಿದರು.
ಕೇಜ್ರಿವಾಲ್ ಅವರ ಅರ್ಜಿಯ ಮೇಲಿನ ಚರ್ಚೆಯನ್ನು ಮುಂದಿನ ವಾರ ಮುಗಿಸಲು ಪ್ರಯತ್ನಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್, ಗಡುವಿನ ನಂತರ ಅರವಿಂದ್ ಕೇಜ್ರಿವಾಲ್ ಶರಣಾಗುವಂತೆ ಕೇಳಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದರು. ಜೂನ್ 2 ರಂದು ದೆಹಲಿ ಸಿಎಂ ಶರಣಾಗಬೇಕು ಎಂದು ಕೋರ್ಟ್ ಹೇಳಿದೆ.
ಹಿಂದಿನ ವಿಚಾರಣೆಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇಡಿ ಗುರುವಾರ ಕೇಜ್ರಿವಾಲ್ ಅರ್ಜಿಯನ್ನು ವಿರೋಧಿಸಿ ಅಫಿಡವಿಟ್ ಸಲ್ಲಿಸಿತ್ತು. ಕಾನೂನುಗಳು ಎಲ್ಲರಿಗೂ ಒಂದೇ ಮತ್ತು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದು ಮೂಲಭೂತ, ಸಾಂವಿಧಾನಿಕ ಅಥವಾ ಶಾಸನಬದ್ಧ ಹಕ್ಕಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.
ಪ್ರಚಾರಕ್ಕಾಗಿ ಯಾವುದೇ ರಾಜಕಾರಣಿಗೆ ಜಾಮೀನು ನೀಡಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಕೇಜ್ರಿವಾಲ್‌ಗೆ ಜೈಲಿನಿಂದ ಎಎಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಅವಕಾಶ ನೀಡಿರುವುದು ತಪ್ಪು ಸಂಕೇತ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಮಂಗಳವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಮೇ 20 ರವರೆಗೆ ವಿಸ್ತರಿಸಿತ್ತು.