ಶಿವಮೊಗ್ಗ: ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಮತಯಾಚನೆ ನಡೆಸುತ್ತಿವೆ. ರಾಹುಲ್ ಗಾಂಧಿ ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದು, ಗೀತಾ ಶಿವ ರಾಜ್‍ಕುಮಾರ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯುವುದರ ಜೊತೆಗೆ ಪ್ರಜ್ವಲ್ ರೇವಣ್ಣ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಎನ್ ಡ್ರೈವ್ ಪ್ರಕರಣ ಇಡೀ ದೇಶದ ಗಮನವನ್ನೇ ಸೆಳೆದಿದೆ. 400 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ. ಇದು ಬರೀ ಅತ್ಯಾಚಾರವಷ್ಟೇ ಅಲ್ಲ. ಇದೊಂದು ಸಾಮೂಹಿಕ ಅತ್ಯಾಚಾರವಾಗಿದೆ. ಒಬ್ಬ ಮಾಸ್ ರೇಪಿಸ್ಟ್ ಪರವಾಗಿ ಪ್ರಧಾನಿ ಮೋದಿ ಅವರು ಮತಯಾಚನೆ ಮಾಡಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಪ್ರಕರಣ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು. ಆದರೂ ಆ ಪಕ್ಷದ ಮುಖಂಡರು ಹಾಗೂ ಪ್ರಧಾನಿ ಮೋದಿ ಅವರು ಆ ವ್ಯಕ್ತಿಯ ಪರವಾಗಿ ಮತಯಾಚನೆ ಮಾಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಪರವಾಗಿ ಬಿಜೆಪಿ ನಾಯಕರು ಆ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
400 ಜನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿದೆ. ಇದನ್ನು ಮಾಸ್ ರೇಪ್ ಎಂದು ಕರೆಯಲಾಗುತ್ತದೆ. ಪ್ರಜ್ವಲ್ ರೇವಣ್ಣಗೆ ವೋಟ್ ಹಾಕಿ ಅಂತ ಪ್ರಧಾನಿ ಮೋದಿ ಅವರು ಕೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತೆಯರ ತನಿಖೆ ನಡೆಸಿದ್ದು, ಪ್ರಜ್ವಲ್ ರೇವಣ್ಣನಿಗೂ ನೋಟೀಸ್ ನೀಡಿದ್ದಾರೆ.