ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋಗಳು ವೈರಲ್ ಆದ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಜೆಡಿಎಸ್ ವರಿಷ್ಠರು ಈ ಸಂಬಂಧ ಮಹತ್ವದ ಆದೇಶ ಹೊರಡಿಸಿದ್ದಾರೆ.
ಹಾಸನದಲ್ಲೆಲ್ಲಾ ಈ ಪೆನ್ ಡ್ರೈವ್ ವಿಚಾರವೇ ಸಾಕಷ್ಟು ಸದ್ದು ಮಾಡಿತ್ತು. ಚುನಾವಣೆ ಬಳಿಕ ರಾಜ್ಯಾದ್ಯಂತ ಪೆನ್ ಡ್ರೈವ್ ನದ್ದೇ ಚರ್ಚೆಯಾಗುತ್ತಿದೆ. ಈ ವಿಚಾರ ಜೆಡಿಎಸ್ ಪಕ್ಷಕ್ಕೆ ಮುಜುಗರ ತಂದಿತ್ತು. ಪಕ್ಷದಲ್ಲೂ ಪ್ರಶ್ನೆ ಮಾಡಲು ಶುರು ಮಾಡಿದರು. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು, ದೂರುಗಳು ಬರುತ್ತಲೆ ಇದಾವೆ. ಪ್ರಜ್ವಲ್ ರೇವಣ್ಣ ಅವರನ್ನು ಮೊದಲು ಪಕ್ಷದಿಂದ ವಜಾಗೊಳಿಸಿ ಎಂಬ ಒತ್ತಾಯಗಳು ಪಕ್ಷದಿಂದಾನೇ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡ ಅವರು, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಒಂದಲ್ಲ ಎರಡಲ್ಲ ಸುಮಾರು 3 ಸಾವಿರ ವಿಡಿಯೋಗಳು ಆ ಪೆನ್ ಡ್ರೈವ್ ನಲ್ಲಿ ದಾಖಲಾಗಿವೆ. ಪ್ರಜ್ವಲ್ ರೇವಣ್ಣ ಅವರ ಜೊತೆಗಿನ ಅಶ್ಲೀಲ ವಿಡಿಯೋಗಳು ರಿಲೀಸ್ ಆಗಿರುವುದು ಆ ಹೆಣ್ಣು ಮಕ್ಕಳಿಗೂ ಸಮಸ್ಯೆಯಾಗಿದೆ. ಕೆಲವು ಸಂತ್ರಸ್ತೆಯರು ಧೈರ್ಯ ಮಾಡಿ ಈಗಾಗಲೇ ದೂರು ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಮಾತ್ರವಲ್ಲ ರೇವಣ್ಣ ಅವರ ಮೇಲೂ ದೂರುಗಳು ದಾಖಲಾಗಿವೆ.
ಈ ಸಂಬಂಧ ಕಾಂಗ್ರೆಸ್ ನಾಯಕರು ಆಕ್ರೋಶ ಭರಿತರಾಗಿದ್ದಾರೆ. ಸಂಸದ ಸ್ಥಾನದಲ್ಲಿದ್ದುಕೊಂಡು ಸಹಾಯ ಕೇಳಲು ಬಂದ ಮಹಿಳೆಯರನ್ನು ಈ ರೀತಿ ಬಳಸಿಕೊಳ್ಳುವುದು ಎಷ್ಟು ಸರಿ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ ಅವರು ನಮ್ಮ ಕುಟುಂಬವೇ ಬೇರೆ ಅವರ ಕುಟುಂಬವೇ ನೇರ ಎಂದು ಹೇಳುವ ಮೂಲಕ ಕೈ ತೊಳೆದುಕೊಂಡಿದ್ದಾರೆ.