ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಎಲ್ಲೆಡೆ ಸದ್ದು ಮಾಡುತ್ತಾ ಇದೆ. ಈ ಕೇಸನ್ನು ಎಸ್ಐಟಿ ತನಿಖೆಗೆ ಕೂಡ ರಾಜ್ಯ ಸರ್ಕಾರ ಒಪ್ಪಿಸಲಾಗಿದೆ. ತನಿಖೆ ಕೂಡ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲೇಬೇಕು. ತಪ್ಪು ಮಾಡಿದವರಿಗೆ ಪಕ್ಷದಿಂದ ಕ್ರಮ ಆಗುತ್ತೆ ಎಂದಿದ್ದಾರೆ.
ಈ ಕೇಸ್ ಗೆ ಸಂಬಂಧಿಸಿದಂತೆ ಎಸ್ಐಟಿ ರಚನೆಯಾಗಿದೆ. ಯಾರು ತಪ್ಪು ಮಾಡಿದರು ಕಾನೂನಿಗೆ ತಲೆ ಬಾಗಲೇಬೇಕು. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ಇದರಲ್ಲಿ ಕುಟುಂಬವನ್ನು ತರುವುದು ಬೇಡ. ಇದು ವ್ಯಕ್ತಿಯ ಪ್ರಶ್ನೆ. ಹೀಗಾಗಿ ವ್ಯಕ್ತಿಯನ್ನು ಪ್ರಶ್ನೆ ಮಾಡಿ. ತಪ್ಪು ಮಾಡಿದರೆ ಶಿಕ್ಷೆಯಾಗಲೇಬೇಕು. ಅದನ್ನು ನಾನು ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಎಫ್ಐಆರ್ ಹಾಕಿದ್ದಾರೆ. ತನಿಖೆಯಾಗಲಿ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿ. ಪೆನ್ ಡ್ರೈವ್ ಯಾರು ಬಿಟ್ಟಿದ್ದಾರೆ ಎಂಬೆಲ್ಲಾ ಸತ್ಯ ಬರಲಿ ಎಂದಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ನನ್ನ ಮತ್ತು ದೇವೇಗೌಡರ ಹೆಸರನ್ನು ಎಳೆದು ತರಬೇಡಿ. ನನ್ನ ಕೇಳಿ ಹೋಗ್ತಾನಾ..? ದಿನ ನನ್ನ ಕೇಳಿ ಓಡಾಡುತ್ತಾನಾ..? ನನ್ನ ಗಮನಕ್ಕೆ ಬಂದರೆ ಸರಿ ಪಡಿಸಬಹುದಿತ್ತು. ಪಕ್ಷದಿಂದ ಕ್ರಮ ತೆಗೆದುಕೊಳ್ಳುತ್ತೇನೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಮಹಿಳೆಯರಿಗೆ ದೇವೇಗೌಡರು ಹಾಗೂ ನಾನು ಗೌರವದಿಂದ ನಡೆದುಕೊಂಡಿದ್ದೇನೆ. ಅವರ ಕುಟುಂಬವೇ ಬೇರೆ . ಅವರು ನಾಲ್ಕು ಜನ ಬೇರೆ ಇದ್ದಾರೆ. ನಮ್ಮ ಕುಟುಂಬವೇ ಬೇರೆ. ನಮ್ಮ ಕುಟುಂಬ ಎಂದರೆ ನಾವೂ ದೇವೇಗೌಡರು ಎಂದಿದ್ದಾರೆ.