ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ ಹವಮಾನ ಇಲಾಖೆ.
ಏಪ್ರಿಲ್ 29 ರಿಂದ 3 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬಾಗಲಕೋಟೆ, ಗದಗ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ತುಮಕೂರು, ಮೈಸೂರು,ಹಾಸನದಲ್ಲಿ ಮಳೆಯಾಗಲಿದೆ. ಹೀಗಾಗಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮೇ 1ರಿಂದ ಮಳೆಯಾಗುವ ಸಾಧ್ಯತೆ ಇದೆ.
ಸದ್ಯ ರಾಜ್ಯಾದ್ಯಂತ ಉಷ್ಣಾಂಶ ಜಾಸ್ತಿಯಾಗುತ್ತಿದೆ. ದಿನೇ ದಿನೇ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೂ ಡಿಹೈಡ್ರೇಷನ್ ಸಮಸ್ಯೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಇದರ ನಡುವೆ ಮಕ್ಕಳಿಗೆ ಬೇಸಿಗೆ ರಜೆ ಬೇರೆ ಇದೆ. ಹೀಗಾಗಿ ಮಕ್ಕಳನ್ನು ಈ ಉರಿ ಬಿಸಿಲಿನಿಂದ ಕಾಪಾಡಿಕೊಳ್ಳುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಬೇಸಿಗೆ ಕಾಲವೇ ಬೇಗ ಮರೆಯಾಗಲಿ ಎಂದು ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ.
ಉಷ್ಣಾಂಶದ ಹೆಚ್ಚಳಕ್ಕೆ ಬೆಂದು ಹೋಗುತ್ತಿರುವ ಜನ ಒಂದು ಕಡೆಯಾದರೆ, ಜಾನುವಾರುಗಳ ಪರಿಸ್ಥಿತಿಯೂ ಕೆಟ್ಟದಾಗಿಯೇ ಇದೆ. ಸರಿಯಾಗಿ ನೀರು ಸಿಗದೆ, ಹಸಿ ಮೇವು ಸಿಗದೆ ಪ್ರಾಣಿಗಳು ಕೂಡ ಸಂಕಟ ಪಡುತ್ತಿವೆ. ಹೀಗಾಗಿ ಬೇಗ ಮಳೆ ಬಂದರೆ ಜನರಿಗೆ ಮಾತ್ರವಲ್ಲ ಜಾನುವಾರುಗಳಿಗೂ ನೆಮ್ಮದಿಯೇ ಸರಿ.