ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 22 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರ ಒಲವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ನಗರಕ್ಕೆ ಆಗಮಿಸುತ್ತಿರುವುದರಿಂದ ಹಳೆ ಮಾಧ್ಯಮಿ ಶಾಲಾ ಆವರಣದಲ್ಲಿ ಪೆಂಡಾಲ್ ಸಿದ್ದತೆ ವೀಕ್ಷಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅವರು ಮಧ್ಯಾಹ್ನ 2-30 ಕ್ಕೆ ಆಗಮಿಸಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿಟ್ಟುಕೊಂಡಿದ್ದೇವೆ. ಸುರ್ಜಿವಾಲಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು+ ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ನೆಹರು ಕುಟುಂಬದ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಕಾಂಗ್ರೆಸ್‍ಗೆ ತ್ಯಾಗ ಬಲಿದಾನಗಳ ಇತಿಹಾಸವಿದೆ. ದೇಶದ ಮುಂದಿನ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರ ಮತಯಾಚನೆ ಮಾಡುವರು. ಪ್ರಧಾನಿ ಹುದ್ದೆಯನ್ನು ತಿರಸ್ಕರಿಸಿದ ಸೋನಿಯಾಗಾಂಧಿ ಯಾವುದೇ ಅಧಿಕಾರ ಬೇಡ. ದೇಶ ರಕ್ಷಣೆಗೆ ನಾವು ಸಿದ್ದ ಎಂದು ತ್ಯಾಗ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು, ಕಾಂಗ್ರೆಸ್ ಪಕ್ಷ. ಬಿಜೆಪಿ. ಕೊಡುಗೆ ದೇಶಕ್ಕೆ ಏನು ಇಲ್ಲ. ಬಡವರಿಗೆ ಗ್ಯಾರೆಂಟಿಗಳನ್ನು ನೀಡಿದ್ದೇವೆ. ಕಳೆದ ಹತ್ತು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದ ಬಿಜೆಪಿ. ಬೆಲೆ ಏರಿಕೆ ಮಾಡಿರುವುದೇ ಸಾಧನೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುರುಳಿಧರ ಹಾಲಪ್ಪ ಮಾತನಾಡುತ್ತ ಕಾಂಗ್ರೆಸ್‍ನ ಲಕ್ಕಿ ಸ್ಟಾರ್ ಪ್ರಿಯಾಂಕಾ ಗಾಂಧಿ ಚಿತ್ರದುರ್ಗಕ್ಕೆ ಬರುತ್ತಿರುವುದರಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಬೇಕು. ಪ್ರಿಯಾಂಕಾ ಗಾಂಧಿ ಎಲ್ಲೆಲ್ಲಿ ಕಾಲಿಡುತ್ತಾರೋ ಅಲ್ಲೆಲ್ಲಾ ಕಾಂಗ್ರೆಸ್‍ಗೆ ಗೆಲುವು ಖಚಿತ. ಮೂರು ಲಕ್ಷದ ಎಂಬತ್ತು ಸಾವಿರ ಗ್ಯಾರೆಂಟಿ ಕಾರ್ಡ್‍ಗಳು ಹಂಚಿಕೆಯಾಗಿದೆ. ಇದರ ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನು ಹೊಸ ಹೊಸ ಗ್ಯಾರೆಂಟಿಗಳು ಜನತೆಗೆ ಸಿಗುತ್ತದೆ. ಪ್ರಿಯಾಂಕಾ ಗಾಂಧಿ ಪ್ರಚಾರದಿಂದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗಕ್ಕೆ ಆಗಮಿಸುತ್ತಿರುವುದರಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿಕೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಮೆಹಬೂಬ್‍ಖಾತೂನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.