ಧಾರವಾಡ: ನೇಹಾ ಹತ್ಯೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಪಿ ಫಯಾಜ್ ನನ್ನು ಗಲ್ಲಿಗೇರಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ. ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಒಂದರ್ಧ ದಿನ ಧಾರವಾಡ ಬಂದ್ ಗೆ ಮುಸ್ಲಿಂ ಸಂಘಟನೆಗಳೇ ಕರೆ ನೀಡಿವೆ.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾಗಿರುವುದು ದುರ್ಧೈವ. ನಮ್ಮಮಹಾನಗರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನಮ್ಮ ಸಮುದಾಯದಿಂದ ನಾಳೆ ಅರ್ಧ ದಿನ ಸ್ವಯಂ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುತ್ತೇವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಅಂಗಡಿಗಳನ್ನು ಬಂದ್ ಮಾಡಿ, ಅಂಗಡಿಗಳ ಮೇಲೆ ಜಸ್ಟೀಸ್ ಫಾರ್ ನೇಹಾ ಎಂಬ ಸ್ಟಿಕ್ಕರ್ ಅಂಟಿಸುತ್ತೇವೆ. ಫಯಾಜ್ ಮಾಡಿರುವುದು ಹೀನ ಕೆಲಸ. ಅವಳು ನಿರಂಜನ ಮಗಳಲ್ಲ, ನಮ್ಮ ಮಗಳು. ಫಯಾಜ್ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದು ವಿಶೇ ಪ್ರಕರಣ ಎಂದು ತಿಳಿದು, 90 ದಿನದಲ್ಲಿ ಪ್ರಕರಣ ಮುಗಿಸಬೇಕು. ಸಮಾಜ ಯಾವುದೇ ಇರಲಿ, ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು. ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಮನವಿ ಮಾಡಿದ್ದೇವೆ. ಸೋಮವಾರ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಿದ್ದೇವೆ. ಅಂಜುಮನ್ ಆವರಣದಿಂದ ಮೌನ ಮೆರವಣಿಗೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನ ಒಂದು ಕೊಠಡಿಯನ್ನು ನೇಹಾ ಹೆಸರಲ್ಲಿ ಇಡುತ್ತೇವೆ. ಫಯಾಜ್ ಪರವಾಗಿ ಯಾವ ಮುಸ್ಲಿಂ ವಕೀಲರು ವಜಾಲತ್ತು ವಹಿಸಬಾರದು. ನಾವೂ ವಕೀಲರಿಗೂ ಹೇಳಿದ್ದೇವೆ. ಅವರು ಕೂಡ ಒದಕ್ಕೆ ಒಪ್ಪಿದ್ದಾರೆ. ಪ್ರಕರಣ ಮುಗಿಯುವ ತನಕವೂ ನಮ್ಮ ಸಮುದಾಯ ಅವರ ಜೊತೆಗೆ ಇರಲಿದೆ ಎಂದು ಮುಖಡಂರು ಸಭೆಯಲ್ಲಿ ತಿಳಿಸಿದ್ದಾರೆ.