ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20 : ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾದಾಗ ಮಾತ್ರ ಮಾದಿಗರ ಮೀಸಲಾತಿ ವರ್ಗಿಕರಣ ಸಾಧ್ಯ ಎಂದು ಮಾದಿಗರ ಮೀಸಲಾತಿ ವರ್ಗಿಕರಣ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ನೀಡಿರುವ ಹೇಳಿಕೆಯನ್ನು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಕುಮಾರ್ ತೀವ್ರವಾಗಿ ಖಂಡಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಡಿಯಲ್ಲಿ ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಇದುವರೆವಿಗೂ ಆಗಿಲ್ಲ. ಏಕಾಏಕಿ ಮಂದಕೃಷ್ಣ ಮಾದಿಗ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನರೇಂದ್ರಮೊದಿಗೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹೇಳಿ ದಲಿತರನ್ನು ದಿಕ್ಕು ತಪ್ಪಿಸುವ ಕುತಂತ್ರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ. ಕೇಂದ್ರಕ್ಕೆ ವರದಿ ಶಿಫಾರಸ್ಸು ಮಾಡಲಿಲ್ಲ. ದಲಿತರ ಓಟುಗಳನ್ನು ತೆಗೆದುಕೊಳ್ಳುವುದಕ್ಕಾಗಿ ಬಿಜೆಪಿ. ಮಂದಕೃಷ್ಣ ಮಾದಿಗ ಮೂಲಕ ಇಂತಹ ಹೇಳಿಕೆ ಕೊಡಿಸುತ್ತಿದೆ. ಇದು ವೈಯಕ್ತಿಕ ಲಾಭ ಬಿಟ್ಟರೆ ದಲಿತರಿಗೇನು ಅನುಕೂಲವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ. ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿ ಎನ್ನುವ ಬಹಿರಂಗ ಹೇಳಿಕೆ ನೀಡಿದಾಗ ಧ್ವನಿ ಎತ್ತದ ಮಂದಕೃಷ್ಣ ಮಾದಿಗ ಈಗ ಕೋಮುವಾದಿಗಳನ್ನು ಓಲೈಸುವ ಹುನ್ನಾರ ನಡೆಸುತ್ತಿರುವುದಕ್ಕೆ ಮಾದಿಗರು ಲೋಕಸಭೆ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಮತ ಚಲಾಯಿಸುವಂತೆ ಮನವಿ ಮಾಡಿದರು.
ದಲಿತ ಮುಖಂಡ ಡಿ.ದುರುಗೇಶ್ ಮಾತನಾಡುತ್ತ ಮಂದಕೃಷ್ಣ ಮಾದಿಗ ಬಿಜೆಪಿ.ಯವರ ಮನುವಾದದ ಮನಸ್ಥಿತಿಯನ್ನು ಇನ್ನು ಅರ್ಥಮಾಡಿಕೊಳ್ಳದ ಕಾರಣ ಇಂತಹ ಮಾತುಗಳನ್ನಾಡುತ್ತಿದ್ದಾರೆ. ಜಾತಿ ವ್ಯವಸ್ಥೆ ಯಥಾವತ್ತಾಗಿ ಉಳಿಯಬೇಕೆನ್ನುವುದೆ ಮನುವಾದಿಗಳ ಉದ್ದೇಶ. ಇದಕ್ಕೆ ಮಂದಕೃಷ್ಣ ಮಾದಿಗ ಬೆಂಬಲವಾಗಿ ನಿಂತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು?
ಲಾಲ್‍ಕೃಷ್ಣ ಅಡ್ವಾಣಿಗೆ ಪ್ರಧಾನಿ ನರೇಂದ್ರಮೋದಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ನಿಲ್ಲಿಸಿಕೊಂಡಿದ್ದರು. ಇದಕ್ಕಿಂತ ದೊಡ್ಡ ಅವಮಾನ ಇನ್ನೇನು ಬೇಕು? ಮಂದಿಕೃಷ್ಣ ಮಾದಿಗ ತೆಲಂಗಾಣದ ಅಸ್ಪøಶ್ಯರೆ ವಿರುದ್ದ ಹೋರಾಡಬೇಕೆ ವಿನಃ ಪುರೋಹಿತಶಾಹಿಗಳ ಮನವೊಲಿಸುವ ಕೆಲಸ ಮಾಡಬಾರದೆಂದು ಎಚ್ಚರಿಸಿದರು.
ಚಿಕ್ಕಣ್ಣ, ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.